ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದ ಮಿನಾಜ್ ಅಲಿಯಾಸ್ ಸುಲೇಮಾನ್ ಎಂಬಾತನನ್ನು ಎನ್ ಐ ಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಸುಲೇಮಾನ್ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ. ಇದಕ್ಕಾಗಿಯೇ ಯುವಕರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರೇಪಿಸುತ್ತಿದ್ದ. ನಿಷೇಧಿತ ಪಿಎಫ್ ಐ ಸಂಘಟನೆಯ ಸದಸ್ಯ ಮಿನಾಜ್ ಹಾಗೂ ಆತನ ಗುಂಪಿನ ಮತ್ತೋರ್ವ ಸದಸ್ಯ ಸಯ್ಯದ್ ಸಮೀರ್ ಎಂಬಾತನನ್ನು ಈ ಹಿಂದೆ ಎನ್ ಐ ಎ ಬಂಧಿಸಿತ್ತು. ಬಳಿಕ ಆತನನ್ನು ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಆದರೆ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಮಿನಾಜ್ ಕೈವಾಡ ಇರುವ ಕುರಿತು ಮಹತ್ವದ ಸುಳಿವುಗಳು ಲಭ್ಯವಾದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ.
ನ್ಯಾಯಾಲಯಕ್ಕೆ ಬಾಡಿ ವಾರಂಟ್ ಸಲ್ಲಿಸಿದ ಅಧಿಕಾರಿಗಳು ಆತನನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.