ವಿಧಾನ ಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ: ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು  ಯತ್ನಿಸಿದ ಬಿಜೆಪಿ ಯುವ ಮೋರ್ಚಾ: ನಾಸೀರ್ ಹುಸೇನ್ ಅವರನ್ನು ಬಂಧಿಸಿ:ಹರೀಶ್ ಪೂಂಜ ಆಗ್ರಹ

 

 

ಬೆಳ್ತಂಗಡಿ:ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ವಿಜಯೋತ್ಸವದ ವೇಳೆ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಕೇಳಿಬಂದಿದ್ದು,
ಘಟನೆ ಸಂಬಂಧ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮುಂದಾದರು. ಬಳಿಕ ಪಕ್ಷದ ಕಚೇರಿಯೆದುರು ಧರಣಿ ನಡೆಸಿದರು. ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನಕ್ಕೆ ಅವಕಾಶ ನೀಡದ ಪೊಲೀಸರು ಪ್ರತಿಭಟನಾನಿರತರನ್ನು ವಶಕ್ಕೆ ಪಡೆದು ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಿಸಿದರು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮತ್ತು ಕಾಂಗ್ರೆಸ್ ಕಚೇರಿಗಳಿಗೆ ಮುತ್ತಿಗೆ ಹಾಕಲು ಬಿಜೆಪಿ ನಾಯಕರು ಕರೆ ಕೊಟ್ಟಿದ್ದಾರೆ.

ಈ ವೇಳೆ ಮಾತನಾಡಿದ ಶಾಸಕ ಹರೀಶ್ ಪೂಂಜ
ವಿಧಾನ ಸೌಧದ ಆವರಣದಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಸೇರಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ನಾಚಿಕೆ ಗೇಡಿನ ಸಂಗತಿಯಾಗಿದೆ. ಅವತ್ತು ಕಾಂಗ್ರೆಸ್ ಜಿನ್ನಾನ ಮಾನಸಿಕತೆಯಲ್ಲಿ‌ ಇತ್ತೊ ಇವತ್ತು ಸಿದ್ಧರಾಮಯ್ಯ ಅದೇ ಮಾನಸಿಕತೆಯಲ್ಲಿ ಇದ್ದಾರೆ. ದೇಶ ವಿರೋಧಿ ಘೋಷಣೆ ಕೂಗಿರುವಂತಹ ನಾಸೀರ್ ಹುಸೇನ್ ಅಂತವರನ್ನು ರಾಜ್ಯ ಸಭೆಗೆ ಕಳುಹಿಸುತ್ತಿರುವುದು ನಾಚಿಕೆಗೇಡಿನ ವಿಚಾರ,ಕಾಂಗ್ರೆಸ್ ಪಕ್ಷ ನಿಜವಾಗಲೂ ದೇಶ ಪ್ರೇಮಿಯಾಗಿದ್ದರೆ ನಾಸೀರ್ ಹುಸೇನ್ ಅವರನ್ನು ಬಂಧಿಸಬೇಕು ಅವರನ್ನು ಪಾರ್ಟಿಯಿಂದ ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ನಿಯೋಗದಿಂದ ದೂರು:

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಾಸೀರ್ ಹುಸೇನ್ ಹಾಗೂ ಬೆಂಬಲಿಗರ ವಿರುದ್ಧ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಿಯೋಗ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದೆ.ಬಳಿಕ ಮಾತನಾಡಿದ‌ ಆರ್.ಅಶೋಕ್, “ವಿಧಾನಸೌಧದ ಮೇಲೆ ಇವರು ಪಾಕಿಸ್ತಾನ ಬಾವುಟ ಹಾರಿಸುವ ಸನ್ನಿವೇಶ ಸೃಷ್ಟಿಯಾಗುತ್ತಿದೆ. ಶಕ್ತಿಸೌಧದ ಒಳಗೆ ಈ ರೀತಿಯವರು ಎಷ್ಟು ಜನ ಅಡಗಿದ್ದಾರೋ?. ಮುಂಬೈ ತಾಜ್ ಹೋಟೆಲ್​ನಲ್ಲಿ ಆದಂತಹ ಭಯ ನನಗೆ ಆಗುತ್ತಿದೆ. ಪೊಲೀಸರು ಕೈ ಕಟ್ಟಿ ನಿಂತುಕೊಂಡಿದ್ದಾರೆ. ಪಿಎಫ್​ಐ ಸೇರಿದಂತೆ ದೇಶದ್ರೋಹಿಗಳ ವಿರುದ್ಧದ 1,200 ಪ್ರಕರಣಗಳನ್ನು​ ಈ ಸರ್ಕಾರ ವಾಪಸ್ ತೆಗೆದುಕೊಂಡಿದೆ. ಪೊಲೀಸರು ಪ್ರಶ್ನೆ ಮಾಡಿದರೆ ವರ್ಗಾವಣೆ ಮಾಡುತ್ತಾರೆ ಅಂತಾ ಭಯಗೊಂಡಿದ್ದಾರೆ”.

“ಏಳೂವರೆ ಕೋಟಿ ಜನರ ಪವಿತ್ರ ಕ್ಷೇತ್ರದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ್ದಾರೆ. ಕಾಂಗ್ರೆಸ್‌ನವರು ಮಜಾ ಮಾಡ್ತಿದ್ದಾರೆ. ಇಂಥ ನಾಲಾಯಕ್ ಸರ್ಕಾರ ಯಾವುದೂ ಇಲ್ಲ. ಸಂವಿಧಾನ ಜಾಥಾ ಮಾಡ್ಕೊಂಡು ಓಡಾಡಿದರು. ಪಾಕಿಸ್ತಾನ ಜಿಂದಾಬಾದ್ ಎಂಬವರ ಕೈಗೆ ಸಂವಿಧಾನ ಕೊಡಬೇಕಾ? ಈ ಹಿಂದೆ ಸಂಸದ ಡಿ.ಕೆ.ಸುರೇಶ್ ದೇಶ ಒಡೆಯುವ ಹೇಳಿಕೆ ಕೊಟ್ಟಿದ್ದರು. ‌ಇವತ್ತಿನ ದೇಶ ವಿರೋಧಿ ಹೇಳಿಕೆಗೆ ಅದು ಸಿಂಕ್ ಆಗ್ತಿದೆ” ಎಂದು ಹೇಳಿದರು.

ಪ್ರಹ್ಲಾದ್​ ಜೋಶಿ ಹೇಳಿಕೆ: “ರಾಜ್ಯಸಭಾ ಚುನಾವಣೆಯಲ್ಲಿ ಜಯಗಳಿಸಿದ ನಾಸೀರ್ ಹುಸೇನ್ ಅವರ ವಿಜಯೋತ್ಸವದ ವೇಳೆ ಬೆಂಬಲಿಗರು ವಿಧಾನಸೌಧದೊಳಗೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು‌ ಅತ್ಯಂತ ಖಂಡನೀಯ. ಘೋಷಣೆ ಕೂಗಿದವರನ್ನು ಸರ್ಕಾರ ಬಂಧಿಸಬೇಕು” ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.ಬೊಮ್ಮಾಯಿ ಹೇಳಿಕೆ: ‘ನಾಸೀರ್ ಹುಸೇನ್ ಅವರ ಬೆಂಬಲಿಗರು ಪಾಕ್​ ಪರ ಘೋಷಣೆ ಕೂಗಿದ್ದಾರೆ. ಈ ವಿಷಯ ಅತ್ಯಂತ ಗಂಭೀರವಾಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ತಪ್ಪಿಸ್ಥರನ್ನು ಬಂಧಿಸಿ‌ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

error: Content is protected !!