ಮಂಗಳೂರು: ಸಸಿಹಿತ್ಲು ಕಡಲ ಕಿನಾರೆಯಲ್ಲಿ ಫೆ.21ರಂದು ಕಡಲಾಮೆ ಮೊಟ್ಟೆಗಳಿಂದ ಮರಿಗಳು ಹೊರಬಂದಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಕಾರದಲ್ಲಿ ಸುರಕ್ಷಿತವಾಗಿ ಕಡಲ ಒಡಲು ಸೇರಿವೆ.
ಈ ಮೊದಲು ಕಡಲಾಮೆಯ ಮೊಟ್ಟೆಯಿಂದ ಮರಿಗಳು ಹೊರ ಬಂದಿದ್ದು 1985ರಲ್ಲಿ. ಬಳಿಕ ಇದೇ ಮೊದಲ ಸಲ ಕಾಣ ಸಿಕ್ಕಿದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ. ಒಟ್ಟು 113 ಮೊಟ್ಟೆಗಳಲ್ಲಿ 88 ಮರಿಗಳು ಹೊರಬಂದಿವೆ.
ಸಸಿಹಿತ್ಲುವಿನಲ್ಲಿ ಕಡಲಾಮೆಯ ಮೊಟ್ಟೆಗಳು ಪತ್ತೆಯಾದ ಬಳಿಕ ಅವುಗಳ ಸುತ್ತ ರಕ್ಷಣಾ ಬೇಲಿ ನಿರ್ಮಿಸಿ ಇಲಾಖೆಯ ಸಿಬ್ಬಂದಿ ನಿತ್ಯ ಕಾವಲು ಕಾಯುತ್ತಿದ್ದರು. ಇನ್ನೊಂದು ಜಾಗದಲ್ಲಿರುವ ಮೊಟ್ಟೆಗಳಿಂದ ಮರಿಗಳು ಒಂದು ವಾರ ಬಿಟ್ಟು ಹೊರಗೆ ಬರುವ ನಿರೀಕ್ಷೆ ಇದೆ.
ಸಸಿಹಿತ್ಲುವಿನಲ್ಲಿ 15 ಕಡೆ ಕಡಲಾಮೆಯ ಮೊಟ್ಟೆಗಳನ್ನು ಈ ವರ್ಷ ಸ್ಥಳೀಯರ ನೆರವಿನಿಂದ ಪತ್ತೆಹಚ್ಚಲಾಗಿದೆ. ಅವುಗಳ ರಕ್ಷಣೆಗೆ ಅರಣ್ಯ ಇಲಾಖೆ ಕ್ರಮವಹಿಸಿದ್ದು, ಸದ್ಯ ಮೊಟ್ಟೆಗಳಿಂದ ಹೊರಬಂದ ಆಮೆ ಮರಿಗಳು ಕಡಲು ಸೇರುವವರೆಗೂ ಅರಣ್ಯ ಸಿಬ್ಬಂದಿಗಳು ಅವುಗಳ ರಕ್ಷಣೆ ಮಾಡಿದ್ದಾರೆ.