ಇಳಿ ವಯಸ್ಸಿನಲ್ಲಿ ಪಿಎಚ್‍ಡಿ ಪದವಿ: ಯುವಜನತೆಗೆ ಮಾದರಿಯಾದ ಹಿರಿಜೀವ: 89ನೇ ವಯಸ್ಸಿನಲ್ಲಿ ಮಹಾಪ್ರಬಂಧ ಮಂಡಿಸಿ ಮಾಕರ್ಂಡೇಯ ದೊಡ್ಡಮನಿಯಿಂದ ಹೊಸ ದಾಖಲೆ..!

ಧಾರವಾಡ: ಗರ್ಭದಿಂದ ಗೋರಿಯ ತನಕ ನಾವೆಲ್ಲರೂ ವಿದ್ಯಾರ್ಥಿಗಳು. ಪ್ರತೀ ದಿನ ನಾವು ಕಲಿಯುವ ಜೀವನ ಪಾಠಗಳು, ವಿಚಾರಗಳು ತುಂಬಾ ಇದೆ. ಕೆಲವೊಬ್ಬರಿಗೆ ಕಲಿಯುವುದು ಎಂದರೆ ಉದಾಸಿನ. ಆದರೆ ಇಲ್ಲೊಂದು ಹಿರಿಜೀವ ತಮ್ಮ ಇಳಿ ವಯಸ್ಸಿನಲ್ಲಿ ಪಿಎಚ್‍ಡಿ ಪದವಿ ಪಡೆದು ಯುವಜನತೆಗೆ ಮಾದರಿಯಾಗಿದ್ದಾರೆ.

ಧಾರವಾಡ ಜಯನಗರದ ನಿವಾಸಿಯಾಗಿರುವ ಮಾಕರ್ಂಡೇಯ ದೊಡ್ಡಮನಿ ನಿವೃತ್ತ ಶಿಕ್ಷಕ. ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಇವರು ಸತತ 18 ವರ್ಷಗಳ ಕಾಲ ಡೋಹರ ಕಕ್ಕಯ್ಯನವರ ವಚನ ಮತ್ತು ಜೀವನ ಸಾಧನೆಯ ಬಗ್ಗೆ ಅಧ್ಯಯನ ನಡೆಸಿ, ‘ಶಿವಶರಣ ಡೋಹರ ಕಕ್ಕಯ್ಯ: ಒಂದು ಅಧ್ಯಯನ’ ಎಂಬ ಮಹಾಪ್ರಬಂಧವನ್ನು ಮಂಡಿಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್‍ಡಿ ಪದವಿ ಪಡೆದು ಡಾಕ್ಟರ್ ಮಾಕರ್ಂಡೇಯ ಆಗಿ ಹೊರಹೊಮ್ಮಿದ್ದಾರೆ.

ಡೋಹರ ಕಕ್ಕಯ್ಯನವರ ಕೇವಲ 6 ವಚನಗಳು ಮಾತ್ರವಿದ್ದು, ಯಾರೂ ಸಹ ಇಲ್ಲಿಯವರೆಗೆ ಈ ಬಗ್ಗೆ ಅಧ್ಯಯನ ಮಾಡುವ ವಿಚಾರ ಮಾಡಿರಲಿಲ್ಲ. ಆದರೆ, ಇತರ ಶರಣರ ವಚನಗಳಲ್ಲಿ ಕಕ್ಕಯ್ಯನವರ ಪ್ರಸ್ತಾಪವಾಗಿದೆ. ಅದನ್ನೆಲ್ಲ ಪರಿಶೀಲಿಸಿ, ಕಕ್ಕಯ್ಯನವರು ಭೇಟಿ ನೀಡಿದ್ದ ಕಾದ್ರೋಳ್ಳಿ, ಕಕ್ಕೇರಿ ಸ್ಥಳಗಳಿಗೂ ಭೇಟಿ ನೀಡಿ, ಸಂಪೂರ್ಣ ಸಂಶೋಧನೆ ನಡೆಸಿ, 150 ಪುಟಗಳ ಈ ಅಧ್ಯಯನ ಮಹಾಪ್ರಬಂಧವನ್ನು ಸಿದ್ಧಪಡಿಸಿದ್ದಾರೆ.

ಡಾಕ್ಟರ್ ಮಾಕರ್ಂಡೇಯ ದೊಡ್ಡಮನಿ ಅವರಿಗೆ ಈಗ 89 ವರ್ಷ. ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲಿ ಇಲ್ಲಿಯವರೆಗೆ 79 ವರ್ಷ ವಯಸ್ಸಿನವರೆಗೂ ಪಿಎಚ್‍ಡಿ ಪದವಿ ಪಡೆದುಕೊಂಡವರು ಇದ್ದಾರೆ. ಆದರೆ, 89 ವರ್ಷದಲ್ಲಿ ಮಹಾ ಪ್ರಬಂಧವನ್ನು ಮಂಡಿಸಿ ತಮ್ಮ ಹೆಸರಿನಲ್ಲಿ ಡಾಕ್ಟರ್ ಎಂಬ ಪದವಿಯ ಜೊತೆಗೆ ಹೊಸ ದಾಖಲೆ ಉಳಿಯುವಂತೆ ಮಾಡಿದವರು ಡಾಕ್ಟರ್ ಮಾಕರ್ಂಡೇಯ ದೊಡ್ಡಮನಿ. ಹಾಯಾಗಿ ಜೀವನ ಸಾಗಿಸಬೇಕಾಗಿದ್ದ ಈ ಸಮಯದಲ್ಲಿ ದಾಖಲೆ ಮಾಡಿದ ಇವರ ಬಗ್ಗೆ ಅನೇಕರು ಸಂತಸಗೊಂಡಿದ್ದಾರೆ.

error: Content is protected !!