ಬೆಳ್ತಂಗಡಿ: ನೈತಿಕಶಿಕ್ಷಣ ಪ್ರಸ್ತುತ ಸಮಾಜಕ್ಕೆ ತುರ್ತು ಅನಿವಾರ್ಯವಾಗಿದ್ದು ಪುಸ್ತಕಗಳು ಸಾರ್ಥಕ ಬದುಕಿಗೆ ದಾರಿದೀಪವಾಗಿವೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಹೇಳಿದರು.
ಅವರು ಮಂಗಳವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯಲ್ಲಿ ಪ್ರಕಟಿಸಿದ “ಜ್ಞಾನಪಥ” ಮತ್ತು “ಜ್ಞಾನರಥ” ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಜ್ಞಾನದೀವಿಗೆಯಾದ ಪುಸ್ತಕಗಳು ಉತ್ತಮ ಹಾಗೂ ಉಪಯುಕ್ತ ಜೀವನ ಸಂಗಾತಿಯಾಗಿದ್ದು, ನೈತಿಕ ಪುಸ್ತಕಗಳಲ್ಲಿರುವ ಲೇಖನಗಳು ಸಾರ್ಥಕ ಬದುಕಿಗೆ ಸ್ಪೂರ್ತಿ ಮತ್ತು ಪ್ರೇರಣೆ ನೀಡುತ್ತವೆ ಎಂದು ಅವರು ಶ್ಲಾಘಿಸಿ ಅಭಿನಂದಿಸಿದರು.
*ಶ್ರೀ ಮಂಜುನಾಥ ಚಲನಚಿತ್ರ”
ತಾನು ಬಾಲ್ಯದಿಂದಲೂ ಧರ್ಮಸ್ಥಳದ ಪರಮ ಭಕ್ತನಾಗಿದ್ದು ಕೆಲವು ವರ್ಷಗಳ ಹಿಂದೆ ಸುಮಾರು ಮೂರು ತಿಂಗಳು ಧರ್ಮಸ್ಥಳ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಾಸ್ತವ್ಯ ಇದ್ದು, “ಶ್ರೀ ಮಂಜುನಾಥ” ಚಲನಚಿತ್ರ ನಿರ್ಮಾಣ ಮಾಡಿರುವ ಸವಿನೆನಪನ್ನು ಸ್ಮರಿಸಿದರು.
ಧರ್ಮಸ್ಥಳಕ್ಕೆ ಬಂದು ಪ್ರಥಮವಾಗಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದು “ಶ್ರೀ ಮಂಜುನಾಥ” ಚಲನಚಿತ್ರ ತಯಾರಿಸುವ ಬಗ್ಯೆ ಅನುಮತಿ ಕೋರಿದಾಗ ಬಹಳ ನಿರೀಕ್ಷೆಯಲ್ಲಿದ್ದ ಅವರಿಗೆ ಆಶ್ಚರ್ಯವಾಯಿತು. ಹೆಗ್ಗಡೆಯವರು ತಕ್ಷಣ ಮಂಜುನಾಥ ದೇವರನ್ನು ವ್ಯಾಪಾರೀಕರಣ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ಆದರೂ ದೇವರನ್ನು ಪ್ರಾರ್ಥಿಸಿ ತನ್ನ ದೃಢಸಂಕಲ್ಪ ನೆರವೇರಿಸಲು ಪ್ರಯತ್ನಿಸಿದರು. ಚಲನಚಿತ್ರ ನಿರ್ಮಾಣಕ್ಕೆ ಭಗೀರಥ ಪ್ರಯತ್ನ ಮಾಡಿದರು.
ವಿಶೇಷವಾಗಿ ಜೈನಧರ್ಮದ ಬಗ್ಗೆ ವಿಶೇಷ ಗೌರವ, ಆದರ ಹೊಂದಿದ ಅವರು ಆಳವಾದ ಅಧ್ಯಯನ ಮಾಡಿ ಮಾಹಿತಿ ಕಲೆ ಹಾಕಿದರು. ಕನ್ನಡದ ಆದಿಕವಿ ಪಂಪನಿಂದ ಹಿಡಿದು ರನ್ನ, ಜನ್ನ, ಪೊನ್ನರ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಏಳು ಕೋಟಿ ರೂ. ವೆಚ್ಛದಲ್ಲಿ ತಯಾರಾದ ಚಲನಚಿತ್ರದಲ್ಲಿ ತಾನು ನಷ್ಟ ಅನುಭವಿಸಬೇಕಾಯಿತು ಎಂದು ಸಿಹಿ-ಕಹಿ ಅನುಭವವನ್ನು ನೆನಪಿಸಿಕೊಂಡರು.
ಶುಭಾಶಂಸನೆ ಮಾಡಿದ ಚಲನಚಿತ್ರ ನಟ ದತ್ತಣ್ಣ (ದತ್ತಾತ್ರೇಯ ಎಚ್.ಡಿ.) ಮನೆಯ ವಾತಾವರಣದಿಂದಲೇ ಉತ್ತಮ ಸಂಸ್ಕಾರ ಮೂಡಿ ಬರಬೇಕು. ಜೀವ ದೊಡ್ಡದಲ್ಲ, ಜೀವನ ದೊಡ್ಡದು. ಮೊದಲು ನಾವು ಯಾರು ಎಂಬುದನ್ನು ಅರಿತುಕೊಂಡು, ನವಚೈತನ್ಯವನ್ನು ಹೊಂದಬೇಕು. ಸಜ್ಜನರ ಸತ್ಸಂಗ ಹಾಗೂ ಉತ್ತಮ ಪುಸ್ತಕಗಳನ್ನು ಓದುವುದರಿಂದ ಮಾನವೀಯ ಮೌಲ್ಯಗಳೊಂದಿಗೆ ಉತ್ತಮ ಸಂಸ್ಕಾರ ಮೂಡಿಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವಿದ್ಯಾರ್ಥಿಗಳು ದೇಶದ ಮುಂದಿನ ಜನಾಂಗವಾಗಿದ್ದು ಅವರ ಉಜ್ವಲ ಭವಿಷ್ಯ ರೂಪಿಸಲಿಕ್ಕಾಗಿ ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಸ್ವಾಮಿ ವಿವೇಕಾನಂದರಂತೆ ಓದಿದ ಪುಸ್ತಕದ ಅನುಭವವನ್ನು ಬದುಕಿನಲ್ಲಿ ಅಳವಡಿಸಿದಾಗ ಜೀವನ ಪಾವನವಾಗುತ್ತದೆ. ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ವಿದ್ಯಾರ್ಥಿಗಳು ದುಶ್ಚಟದಿಂದ ದೂರವಿದ್ದು ಸಮಾಜದ ಅಮೂಲ್ಯ ಆಸ್ತಿಯಾಗಿ ರೂಪುಗೊಳ್ಳಬೇಕು. ಆಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೆಗ್ಗಡೆಯವರು ಹೇಳಿದರು.
ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ನೀಡಲಾಯಿತು.
ಶಾರದಾಮಣಿಶೇಖರ್ ನೇತೃತ್ವದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ಕಲಾವಿದರಿಂದ ಸುಶ್ರಾವ್ಯ ಗಾಯನ ಮತ್ತು ನೃತ್ಯ ಪ್ರದರ್ಶನ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು.
ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ ಧನ್ಯವಾದವಿತ್ತರು.
ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಶಶಿಕಾಂತ ಜೈನ್ ಸ್ವಾಗತಿಸಿದರು. ಶಿಕ್ಷಕ ನಿಶಾಂತ್ ಕಾರ್ಯಕ್ರಮ ನಿರ್ವಹಿಸಿದರು.