ನೆಲೆಸಿದ ಜಾಗದಿಂದ ಒಕ್ಕಲೆಬ್ಬಿಸಲು ಕುತಂತ್ರ: ಕಂಗಲಾದ ವೃದ್ಧ ದಂಪತಿಗಳಿಂದ ದಯಾಮರಣ ಕರುಣಿಸುವಂತೆ ರಾಷ್ಟ್ರಪತಿಗೆ ಅರ್ಜಿ..!

ಕಡಬ: ಕೂಲಿ ಕೆಲಸದಿಂದ ಸಂಪಾದಿಸಿದ ಸುಮಾರು 50ಸಾವಿರ ರೂಪಾಯಿ ಹಣವನ್ನು ಒಬ್ಬರಿಗೆ ನೀಡಿ ಜಾಗವನ್ನು ಖರೀದಿಸಿ ನೆಮ್ಮದಿಯ ಜೀವನ ಮಾಡುತ್ತಿದ್ದ ವೃದ್ಧ ದಂಪತಿಗೆ ವ್ಯಕ್ತಿಯೊಬ್ಬರು ಆ ಜಾಗದಿಂದ ಒಕ್ಕಲೆಳುವಂತೆ ಮಾಡಲು ನ್ಯಾಯಾಲಯದಿಂದ ಆದೇಶ ತಂದ ಹಿನ್ನಲೆ ಕಂಗಲಾದ ವೃದ್ಧ ದಂಪತಿಗಳು ನಮಗೆ ದಯಾಮರಣ ಕರುಣಿಸುವಂತೆ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ ಘಟನೆ ಕಡಬದಲ್ಲಿ ನಡೆದಿದೆ.

ತಮ್ಮ ಜಾಗದಲ್ಲಿ ದನಕರುಗಳನ್ನು ಸಾಕುತ್ತಾ ಜೀವನವನ್ನು ಸಾಗಿಸುತ್ತಿದ್ದ ವೃದ್ಧ ದಂಪತಿಗೆ ಯಾವುದೇ ಪಿತ್ರಾರ್ಜಿತ ಆಸ್ತಿ ಇಲ್ಲ. ಹಾಗಾಗಿ ಖರೀದಿ ಮಾಡಿದ್ದ ಸರ್ಕಾರಿ ಜಾಗಕ್ಕೆ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯನ್ನು ಕಂದಾಯ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಕಡಬ ತಾಲೂಕಿನ ಉಪ್ಪಿನಂಗಡಿ ಹೋಬಳಿಯ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಕಳೆದ 6 ವರ್ಷಗಳಿಂದ ವಾಸವಾಗಿರುವ ಇವರು ಚಿತ್ರದುರ್ಗ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವರು. ಆದರೆ ಕೂಲಿ ಕೆಲಸಕ್ಕಾಗಿ ಕಡಬಗೆ ಬಂದ ಇವರು ಇಲ್ಲೇ ಕೂಲಿ ಕೆಲಸ ಮಾಡುತ್ತಾ ನೆಲೆಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ವ್ಯಕ್ತಿಯೊಬ್ಬರು ಈ ದಂಪತಿಗಳು ಸರ್ಕಾರಿ ಜಾಗದಲ್ಲಿ ಇದ್ದಾರೆ ಎನ್ನುವ ಕಾರಣಕ್ಕೆ, ಅಲ್ಲಿಂದ ಒಕ್ಕಲೆಬ್ಬಿಸಲು ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದರು. ಹೀಗಾಗಿ ಸ್ಥಳೀಯ ಗ್ರಾಮ ಕರಣಿಕರು ಮನೆಗೆ ಬಂದು ಮೌಖಿಕವಾಗಿ ತಿಳಿಸಿ, ಮನೆ ತೆರವು ಮಾಡುವಂತೆ ನೋಟಿಸ್ ಹಚ್ಚಿ ಹೋಗಿದ್ದಾರೆ. ಆದರೆ ಇವರಿಗೆ ನೀಡಲಾಗಿರುವ ನೋಟಿಸ್ ಈಗಾಗಲೇ ಬೆಳ್ತಂಗಡಿಗೆ ಮದುವೆ ಮಾಡಿಕೊಟ್ಟ ಮಗಳ ಹೆಸರಲ್ಲಿದೆ. ಮಗಳಿಗೂ ಈ ದಂಪತಿಗಳು ವಾಸವಿರುವ ಮನೆಗೂ ದಾಖಲೆಗಳ ಪ್ರಕಾರ ಯಾವುದೇ ಸಂಬಂಧ ಇಲ್ಲ ಎಂದು ದಂಪತಿಗಳು ತಿಳಿಸಿದ್ದಾರೆ.

ನೀಡಿರುವ ನೋಟಿಸ್ ಪ್ರಕಾರ ಇನ್ನು ಎರಡು ದಿನಗಳಲ್ಲಿ ಇವರು ಇರುವ ಜಾಗವನ್ನು ಬಿಟ್ಟು ತೆರಳಬೇಕು ಎಂಬುದಾಗಿಯೂ ತಾಕೀತು ಮಾಡಿದ್ದಾರೆ. ಪಂಚಾಯತ್ ನಿಂದ ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ಈ ನಮ್ಮ ಕುಟುಂಬ ಪಡೆದಿಲ್ಲ. ಸದ್ಯ ತಮ್ಮ ಜಾಗದಿಂದ ತೆರಳುವಂತೆ ನೋಟೀಸ್ ಬಂದ ಹಿನ್ನಲೆ ಕಂಗೆಟ್ಟ ದಂಪತಿಗಳು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿ “ನಮಗೆ ಸರ್ಕಾರಿ ಜಾಗದಲ್ಲಿ ನಾವು ನಿರ್ಮಿಸಿರುವ ಸಣ್ಣ ಮನೆಯಲ್ಲಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಿ. ಅಥವಾ ಅದು ಸಾಧ್ಯವಿಲ್ಲ ಎಂಬುದಾದರೆ ದಯಮಾಡಿ ವೃದ್ಧರಾದ ನಮಗೆ ದಯಾಮರಣಕ್ಕೆ ಅವಕಾಶವನ್ನು ನೀಡಿ” ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಡಬ ತಹಶೀಲ್ದಾರ್ ಪ್ರಭಾಕರ್ ಖಜೂರೆ ಅವರು ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ.

 

error: Content is protected !!