ಲಾಯಿಲ ಗ್ರಾಮ ಸಭೆಯಲ್ಲಿ ಭುಗಿಲೆದ್ದ ಆಕ್ರೋಶ: ಮರ ತೆರವುಗೊಳಿಸಲು ಅರಣ್ಯ ಇಲಾಖೆಗೆ 15ದಿನದ ಗಡುವು ನೀಡಿದ ಗ್ರಾಮಸ್ಥರು: ಟೆಂಟ್ ಹಾಕಿ ಪ್ರತಿಭಟನೆ ಕುಳಿತುಕೊಳ್ಳುವ ಎಚ್ಚರಿಕೆ ಕುಡಿಯಲು ನೀರು ನೀಡಿ ಎಂದು ಖಾಲಿ ಕೊಡಪಾನ ಪ್ರದರ್ಶನ: ನೇತಾಜಿ ಬಡಾವಣೆ ಅಕ್ರಮಗಳ ಸೂಕ್ತ ತನಿಖೆಗೆ ಒತ್ತಾಯ: ಆಯಿಲಾ ರಸ್ತೆ ಕುಸಿತ ಅಧಿಕಾರಿಗಳ ನಿರ್ಲಕ್ಷ್ಯ ಕ್ಕೆ ಗ್ರಾಮಸ್ಥರ ಅಸಮಧಾನ:

 

 

ಬೆಳ್ತಂಗಡಿ: ವಸತಿ ನಿವೇಶನಕ್ಕಾಗಿ ಮೀಸಲಿರಿಸಿದ ಜಾಗದಲ್ಲಿ ಮರಗಳಿದ್ದು ಇದನ್ನು ತೆರವುಗೊಳಿಸಲು ಮನವಿ ಮಾಡಿದ್ದರೂ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ ಘಟನೆ ಲಾಯಿಲ ಗ್ರಾಮಸಭೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮ ಪಂಚಾಯತ್ ನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಫೆ.15ರಂದು ಪಂಚಾಯತ್ ಸಭಾಭವನದಲ್ಲಿ, ಪಂಚಾಯತ್ ಅಧ್ಯಕ್ಷೆ ಜಯಂತಿ ಎಂ.ಕೆ. ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ಪ್ರಾರಂಭದಲ್ಲೇ ಪಂಚಾಯತ್ ವಿರುದ್ದ ಅಸಮಾಧಾನ ಹೊರಹಾಕಿದ ಸಾರ್ವಜನಿಕರು ಕಳೆದ ಗ್ರಾಮ ಸಭೆಯ ನಿರ್ಣಯಗಳು ಅನುಷ್ಠಾನಕ್ಕೆ ಬಾರದಿರುವುದಕ್ಕೆ ಆಕ್ರೋಶ ವ್ಯಕ್ತಡಿಸಿದರು. ಈ ಬಗ್ಗೆ ಮಾತನಾಡಿದ ಶೇಖರ್ ಎಲ್ ಗ್ರಾಮ ಸಭೆಗಳಲ್ಲಿ ಕೇವಲ ಕಾಟಾಚಾರಕ್ಕೆ ಮಾತ್ರ ನಿರ್ಣಯಗಳು ಆಗುತ್ತದೆ. ಯಾವುದೇ ನಿರ್ಣಯಗಳು ಜಾರಿ ಆಗುವುದಿಲ್ಲ. ಗ್ರಾಮ ಪಂಚಾಯತ್ ನ ನಿರ್ಲಕ್ಷ್ಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ , ಗ್ರಾಮಸ್ಥರು ಚಾ ತಿಂಡಿ ಸಿಗುತ್ತದೆ ಎಂಬ ಕಾರಣಕ್ಕೆ ಇಲ್ಲಿ ಬಂದು ಸಮಸ್ಯೆಗಳ ಬಗ್ಗೆ ಚರ್ಚಿಸುವುದಲ್ಲ ಗ್ರಾಮ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಬೆಲೆ ಇಲ್ಲ ಎಂದಾದರೆ ಗ್ರಾಮ ಸಭೆಯ ಅವಶ್ಯಕತೆ ಏನಿದೆ ಈ ಬಗ್ಗೆ ಸಭೆಗೆ ಸರಿಯಾದ ಉತ್ತರ ನೀಡಬೇಕು ಎಂದರು. ಇದಕ್ಕೆ ಉತ್ತರಿಸಿದ ಪಿಡಿಓ ಶ್ರೀನಿವಾಸ್ ಅವರು ಕಳೆದ ಗ್ರಾಮಸಭೆಯ ನಿರ್ಣಯಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಲಾಗಿದೆ ಎಂದರು.  ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಗ್ರಾಮಸಭೆಯ ನಿರ್ಣಯಗಳನ್ನು ಜಾರಿ ಮಾಡದ ತಾಲೂಕು ಮಟ್ಟದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಒತ್ತಾಯಿಸಿದರು. ಒಂದನೇ ವಾರ್ಡಿನ ನೇತಾಜಿ ಬಡಾವಣೆಯಲ್ಲಿ ದುಡ್ಡಿಗಾಗಿ ಸೈಟ್ ಗಳನ್ನು ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ , ಈ ಬಗ್ಗೆ ಸೂಕ್ತ ತನಿಖೆ ನಡೆಸಿ , ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಂಡು ಹಕ್ಕುಪತ್ರ ರದ್ದು ಮಾಡಲು ಒತ್ತಾಯಿಸಲಾಯಿತು. ಮಂಜೂರುಗೊಂಡ 78 ನಿವೇಶನಗಳಲ್ಲಿ 42 ಸೈಟ್ ಗಳು ಖಾಲಿಯಾಗಿದ್ದು ಸೈಟ್ ಮಂಜೂರುಗೊಂಡು 2 ವರ್ಷದಲ್ಲಿ ಮನೆ ನಿರ್ಮಾಣ ಮಾಡಬೇಕು ಎಂಬ ಕಾನೂನು ಇದೆ ಅದರೆ  12 ವರ್ಷಗಳಾದರೂ ಮನೆ ನಿರ್ಮಾಣವಾಗಿಲ್ಲ  ಕೆಲವರು ಇಲ್ಲಿರುವ ಸೈಟ್ ಗಳನ್ನು ಮಾರಾಟ ಮಾಡಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು.  ಖಾಲಿ ಇರುವ ನಿವೇಶನಗಳ ಹಕ್ಕು ಪತ್ರ ರದ್ದುಗೊಳಿಸಿ ಅವಶ್ಯಕತೆ ಇರುವ ವಾರ್ಡಿನ ಜನರಿಗೆ ಹಂಚಬೇಕು.  ಸರ್ಕಾರಿ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣವಾಗುತಿದ್ದು ಈ ಬಗ್ಗೆ ಪಂಚಾಯತ್ ನಿಂದ  ತಹಶೀಲ್ದಾರ್ ಅವರಿಗೆ ದೂರು ನೀಡಿದರೂ  ಕ್ರಮ ಕೈಗೊಳ್ಳದಿರುವ ಬಗ್ಗೆ ತೀವ್ರ ಚರ್ಚೆ ನಡೆಯಿತು ಒಂದು ವೇಳೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಹೋದರೆ ಸರ್ಕಾರಿ ಜಾಗದಲ್ಲಿ ನಿವೇಶನ ರಹಿತರೆಲ್ಲರೂ ಟೆಂಟ್ ನಿರ್ಮಾಣ ಮಾಡಿ ಕುಳಿತುಕೊಳ್ಳುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದಕ್ಕೆ ತಹಶೀಲ್ದಾರ್ ನೇರ ಜವಾಬ್ದಾರಿ ಯಾಗುತ್ತಾರೆ ಎಂಬ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದರು.

ಕಳಪೆ ಕಾಮಗಾರಿ ಕಪ್ಪು ಪಟ್ಟಿಗೆ ಸೇರಿಸಿ:

ಕೈಪ್ಲೋಡಿ ನಿವಾಸಿ ಪದ್ಮನಾಭ ಅವರು ಖಾಲಿ ಕೊಡಪಾನ ಪ್ರದರ್ಶಿಸಿ ಕಳೆದ 2 ವರ್ಷಗಳ ಹಿಂದೆ ಕೈಪ್ಲೋಡಿ ಎಂಬಲ್ಲಿ ದೊಡ್ಡ ಟ್ಯಾಂಕ್ ನಿರ್ಮಾಣ ಮಾಡಿ ಮನೆ ಮನೆಗೆ ನೀರು ಕೊಡುತ್ತೇವೆ ಎಂಬ ಭರವಸೆಯನ್ನು ಜನಪ್ರತಿನಿಧಿಗಳು ನೀಡಿದ್ದರು. ನಾವು ನಂಬಿ ಮತ ಚಲಾಯಿಸಿದ್ದೇವು ಅದರೆ ಇನ್ನೂ ಕೂಡ ನೀರಿನ ವ್ಯವಸ್ಥೆ ಆಗಿಲ್ಲ ಕೊಡಪಾನ ಹಿಡಿದು ಮನೆ ಮನೆಗೆ ಹೋಗಿ ನೀರಿಗಾಗಿ ಬೇಡುವ ಸ್ಥಿತಿ ನಿರ್ಮಾಣವಾಗಿದೆ.ಅದಲ್ಲದೇ ಕಳಪೆ ಕಾಮಗಾರಿಯಿಂದಾಗಿ  ಈಗಲೇ ಟ್ಯಾಂಕ್ ಬಿರುಕು ಬಿಟ್ಟಿದೆ ಎಂದು ಸಭೆಯಲ್ಲಿ ಹಾಸ್ಯಭರಿತವಾಗಿ ಮಾತನಾಡಿ ಅಸಾಮಾಧಾನ ಹೊರಹಾಕಿದರು.ಒಂದು ವೇಳೆ ಟ್ಯಾಂಕ್ ಕಾಮಗಾರಿ ಕಳಪೆ ಮಟ್ಟದ್ದಾಗಿದ್ದರೆ ಅದನ್ನು ನಿರ್ಮಿಸಿದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಗ್ರಾಮಸ್ಥರು ಆಗ್ರಹಿಸಿದರು.

ಪ್ರತಿಭಟನೆಯ ಎಚ್ಚರಿಕೆ:

ಗ್ರಾಮ ಪಂಚಾಯತ್ ಗೆ ಖಾಯಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಯವರನ್ನು ಒಂದು ತಿಂಗಳೊಳಗೆ ನೇಮಕ ಮಾಡದಿದ್ದರೆ ತಾಲೂಕು ಪಂಚಾಯತ್ ಎದುರು ಗ್ರಾಮ ಪಂಚಾಯತ್  ಸದಸ್ಯರ ನೇತೃತ್ವದಲ್ಲಿ ಗ್ರಾಮಸ್ಥರು  ಪ್ರತಿಭಟನೆ ನಡೆಸುವುದು ಎಂದು ನಿರ್ಣಯ ಕೈಗೊಳ್ಳಲಾಯಿತು.

ಮರ ತೆರವು 15 ದಿನಗಳ ಗಡುವು:

ಕಳೆದ ಹಲವಾರು ವರ್ಷಗಳಿಂದ ಗ್ರಾಮಸ್ಥರಿಗೆ ವಸತಿ ನೀಡಲು ಪಂಚಾಯತ್ ನಿಂದ ಸಾಧ್ಯವಾಗುತ್ತಿಲ್ಲ ಈಗಾಗಲೇ ಕಂದಾಯ ಇಲಾಖೆ ಜಾಗ ಮೀಸಲಿರಿಸಿದ ಅಂಕಾಜೆ ಹಾಗೂ ಕನ್ನಾಜೆಯಲ್ಲಿ ಅರಣ್ಯ ಇಲಾಖೆಗೆ ಮರ ತೆಗೆಯುವಂತೆ ಮನವಿ ಮಾಡಿದರೂ ಸ್ಪಂದಿಸದೇ ಇರುವುದರಿಂದ ನಿವೇಶನ ಹಂಚಲಾಗುತ್ತಿಲ್ಲ ಎಂದು ಸಭೆಯಲ್ಲಿ ಪ್ರಸ್ತಾಪವಾದಾಗ ಗ್ರಾಮಸ್ಥರೆಲ್ಲರೂ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಕಂದಾಯ ಇಲಾಖೆ ವಸತಿಗಾಗಿ ಮೀಸಲಿರಿಸಿದ ಜಾಗದಲ್ಲಿ ಮರ ತೆರವುಗೊಳಿಸಲು ಮೀನ ಮೇಷ ಎಣಿಸುತ್ತಿರುವ ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿದರಲ್ಲೇ ಮುಂದಿನ 15 ದಿನಗಳ ಒಳಗಾಗಿ ಇದರಲ್ಲಿ ಇರುವ ಮರಗಳನ್ನು ತೆರವುಗೊಳಿಸಿ ನಿವೇಶನ ಮಾಡಲು ಪಂಚಾಯತ್ ಗೆ ಅವಕಾಶ ಮಾಡಿಕೊಡಬೇಕು ಒಂದು ವೇಳೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರೇ ಮುಂದೆ ನಿಂತು ಮರಗಳನ್ನು ಕಡಿದು ತೆರವು ಮಾಡುತ್ತೇವೆ. ಮುಂದಾಗುವ ಪರಿಣಾಮಗಳಿಗೆ ನೇರ ಹೊಣೆ ಅರಣ್ಯ ಇಲಾಖೆ ಆಗಲಿದೆ ಎಂಬ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದರು.

ಜಗನ್ನಾಥ್ ಪುತ್ರಬೈಲ್ ಮಾತನಾಡಿ ಗಾಂಧಿ ನಗರದ ಬಳಿ ನೆರೆಗೆ ಕೊಚ್ಚಿ ಹೋದ ಮನೆಗಳ ಬದಲಾಗಿ ಹೊಸ ಮನೆಗಳು ನಿರ್ಮಾಣವಾಗಿದ್ದರೂ ಸೂಕ್ತ ದಾಖಲೆ   ಪತ್ರ ಸಿಕ್ಕಿಲ್ಲ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ತಾ.ಪಂ ಮಾಜಿ ಸದಸ್ಯ ಸುಧಾಕರ್ ಬಿ ಎಲ್.ಮಾತನಾಡಿ ಸರ್ಕಾರಿ ಜಾಗ ಅತಿಕ್ರಮಣ ತಡೆಯುವುದು ಅಧಿಕಾರಿಗಳ ಕರ್ತವ್ಯ ಬಡವರ ಮೇಲೆ ಬ್ರಹ್ಮಸ್ತ್ರ ಪ್ರಯೋಗಿಸದೇ ಸರ್ಕಾರಿ ಜಾಗದ ಅಕ್ರಮ ಕಟ್ಟಡ ಸೇರಿದಂತೆ ಜಾಗ ಅತಿಕ್ರಮಣ ಮಾಡಿಕೊಂಡವರ ಮೇಲೆಯೂ ಕ್ರಮ ಕೈಗೊಳ್ಳಬೇಕು ಎಂದರು. ಆಯಿಲ ಎಂಬಲ್ಲಿ ರಸ್ತೆ ಬದಿ ಕುಸಿತಗೊಂಡು 8 ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಈ ಬಗ್ಗೆಯೂ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಮೆಸ್ಕಾಂ, ಆರೋಗ್ಯ ,ಕೃಷಿ , ಮಹಿಳಾ ಮತ್ತು ಮಕ್ಕಳಾ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿಗಳನ್ನು ಸಭೆಯಲ್ಲಿ ಹಂಚಿಕೊಂಡರು.
ಗ್ರಾಮಸಭೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಸತತವಾಗಿ ಗ್ರಾಮಸ್ಥರಿಗೆ ಉಚಿತವಾಗಿ ಕುಡಿಯುವ ನೀರು ನೀಡುತ್ತಿರುವ ಕಾರ್ಮೆಲ್ ಸದನದ ಮುಖ್ಯಸ್ಥರನ್ನು ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು.ಮಾರ್ಗದರ್ಶಿ ಅಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ರತ್ನಾವತಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್, ಉಪಸ್ಥಿತರಿದ್ದರು. ಪಿಡಿಒ ಶ್ರೀನಿವಾಸ ಡಿ.ಪಿ ಸ್ವಾಗತಿಸಿ , ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ ವಂದಿಸಿದರು.
ಗ್ರಾಮ ಸಭೆಯಲ್ಲಿ ಪಂಚಾಯತ್ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಬೃಹತ್ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದರು.

error: Content is protected !!