ರಾಜ್ಯೋತ್ಸವ ಪ್ರಶಸ್ತಿ ಹಣದಿಂದ ಆ್ಯಂಬುಲೆನ್ಸ್ ಖರೀದಿ: ಉದಾರತೆ ಮೆರೆದ ಚಾರ್ಮಾಡಿ ಹಸನಬ್ಬ

ಚಾರ್ಮಾಡಿ: ಕೆಲವರು ದೇಶ ಸೇವೆಗಾಗಿ ಬದುಕು ಮುಡಿಪಾಗಿಟ್ಟರೆ , ಇನ್ನೂ ಕೆಲವರು ಶಿಕ್ಷಣಕ್ಕಾಗಿ ಬದುಕನ್ನು ಮುಡಿಪಾಗಿಡುತ್ತಾರೆ. ಇನ್ನೂ ಹಲವರು ತಮ್ಮ ಊರು, ತಾಯಿ, ನ್ಯಾಯಕ್ಕಾಗಿ ತಮ್ಮ ಜೀವನವನ್ನು ಸವೆಸುತ್ತಾರೆ. ಇವರೆಲ್ಲರ ಮಧ್ಯೆ ಕಳೆದ ಸುಮಾರು 40 ವರ್ಷಗಳಿಂದ ಅಪಘಾತಕ್ಕೆ ಒಳಗಾದವರ ಪ್ರಾಣ ಉಳಿಸಲಿಕ್ಕಾಗಿಯೇ ತನ್ನ ಜೀವವನ್ನು ಮುಡಿಪಾಗಿಟ್ಟವರು ಚಾರ್ಮಾಡಿ ಹಸನಬ್ಬ.

ಚಾರ್ಮಾಡಿಯಲ್ಲಿ ಸಂಭವಿಸುವ ಅಪಘಾತಗಳಲ್ಲಿ ಅನೇಕ ಪ್ರಯಾಣಿಕರ ಉಸಿರು ಕಾಪಾಡಿ ಮರುಜೀವ ನೀಡುವ ಸಂಜೀವಿನಿ ಚಾರ್ಮಾಡಿ ಹಸನಬ್ಬ. 1983ರಿಂದ ನಡೆಯುತ್ತಿರುವ ಈ ಸೇವೆ ಇಂದಿಗೂ ನಿರಂತರವಾಗಿದೆ. ಪ್ರಾಣ ಉಳಿಸುವ ಈ ಪುಣ್ಯ ಕಾರ್ಯದಲ್ಲಿ ತೊಡಗಿಕೊಂಡ ಚಾರ್ಮಾಡಿ ಹಸನಬ್ಬ ಅವರಿಗೆ ಈ ಬಾರಿ ರಾಜ್ಯೊತ್ಸವ ಪ್ರಶಸ್ತಿ ಲಭಿಸಿದ್ದು, ಇದರೊಂದಿಗೆ 5 ಲಕ್ಷ ರೂ. ನಗದು ಕೂಡ ಲಭಿಸಿತ್ತು.

ಚಾರ್ಮಾಡಿಯಲ್ಲಿ ಸಣ್ಣ ಹೊಟೇಲ್ ಹೊಂದಿರುವ ಚಾರ್ಮಾಡಿ ಹಸನಬ್ಬನವರು ಈ ಹಣವನ್ನು ತನ್ನ ಸ್ವಂತಕ್ಕಾಗಿ ಬಳಸಿಕೊಳ್ಳಬಹುದಿತ್ತು. ಆದರೆ ಉದಾರಿಯಾಗಿರುವ ಇವರು ಅದೇ 5 ಲಕ್ಷ ಹಣದಿಂದ ಹೊಸ ಆ್ಯಂಬುಲೆನ್ಸ್ ಖರಿದಿಸಿದ್ದಾರೆ. ಆ್ಯಂಬುಲೆನ್ಸ್ ಬೆಲೆ 8 ಲಕ್ಷರೂ. ಆದರೆ ಹಸನಬ್ಬನವರ ಬಳಿ ಇದ್ದಿದ್ದು 5 ಲಕ್ಷ ರೂ ಮಾತ್ರ. ಹಾಗಾಗಿ ಅವರು ಉಳಿದ ಹಣವನ್ನು ಚಾರ್ಮಾಡಿ ಹಸನಬ್ಬ ಟ್ರಸ್ಟ್ ಮಾಡಿ ಅದರಿಂದ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡು ಆ್ಯಂಬುಲೆನ್ಸ್ ಖರೀದಿಸಿದ್ದಾರೆ.

ಈಗಿನಂತೆ ಫೋನ್ ವ್ಯವಸ್ಥೆಯೂ ಇಲ್ಲದ ಸಮಯದಲ್ಲೂ ಚಾರ್ಮಾಡಿಯ 50ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಿಸಿದ್ದಾರೆ. ಅಲ್ಲದೆ ಪ್ರಪಾತಕ್ಕೆ ಬಿದ್ದಿದ್ದ ಎಷ್ಟೋ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಅಪಘಾತವಾದ ವಿಷಯ ತಿಳಿಯುತ್ತಲೇ ತಮ್ಮ ಕೆಲಸ ಕಾರ್ಯಗಳನ್ನು ಬದಿಗಿರಿಸಿ ರಕ್ಷಿಸುವ ಕಾರ್ಯಕ್ಕೆ ಮುಂದಾಗುತ್ತಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಇಲ್ಲಿ ತನಕ ಇವರು ಯಾರಲ್ಲಿಯೂ ಹಣ ಕೇಳಿ ಪಡೆದಿಲ್ಲ. ಒಂದು ವೇಳೆ ಕೆಲವರು ಇಂಧನ ವೆಚ್ಚಕ್ಕೆ ಎಂದು ಹಣ ನೀಡಿದರೆ ಮಾತ್ರ ತೆಗೆದುಕೊಳ್ಳುತ್ತಾರೆ. ಗಾಯಗೊಂಡವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯವರವರೆಗೆ ಕರೆದುಕೊಂಡು ಬರುವ ಇವರು ಅನೇಕರ ಪಾಲಿಗೆ ಸಂಜೀವಿನಿಯಾಗಿದ್ದಾರೆ.

error: Content is protected !!