4ನೇ ಪ್ರವಾಸಿ ಹಡಗು ಎಂ.ಎಸ್ ರಿವೇರಿಯಾ ನವ ಮಂಗಳೂರು ಬಂದರಿಗೆ ಆಗಮನ: ಪ್ರವಾಸಿಗರಿಗೆ ಭರ್ಜರಿ ಸ್ವಾಗತ: ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ

ಮಂಗಳೂರು : ಹೊಸ ವರ್ಷ 2024 ರ ಮೊದಲ ವಿಹಾರ ನೌಕೆಯಾಗಿ ಮತ್ತು ಕ್ರೂಸ್ ಸೀಸನ್‌ನ ನಾಲ್ಕನೆ ಎಂ.ಎಸ್ ರಿವೇರಿಯಾ ಪ್ರವಾಸಿ ಹಡಗು ಜ.10ರಂದು ನವ ಮಂಗಳೂರು ಬಂದರಿಗೆ ಆಗಮಿಸಿತ್ತು.

ದುಬೈ, ಮುಂಬೈ ಮತ್ತು ಮೊರ್ಮುಗೋವಾ ಬಂದರುಗಳಿಂದ ನಿನ್ನೆ ಮಂಗಳೂರಿಗೆ ಆಗಮಿಸಿದ ಈ ಹಡಗು ಮಾರ್ಷಲ್ ಐಲ್ಯಾಂಡ್ಸ್ ಫ್ಲ್ಯಾಗ್ಡ್ ಹಡಗು ಬರ್ತ್ ನಂ. 04 ರಲ್ಲಿ ಲಂಗರು ಹಾಕಿತ್ತು. 980 ಪ್ರಯಾಣಿಕರು ಮತ್ತು 752 ಸಿಬ್ಬಂದಿ ಆಗಮಿಸಿದ್ದ ಈ ನೌಕೆಯು 239 ಮೀಟರ್ ಉದ್ದವಿದ್ದು, 66,172 ಒಟ್ಟು ಟನ್‌ಗಳ ಸಾಗಿಸುವ ಸಾಮರ್ಥ್ಯ ಹೊಂದಿದೆ.

ಮಂಗಳೂರಿಗೆ ಗೆ ಆಗಮಿಸಿದ ಪ್ರಯಾಣಿಕರಿಗೆ ಯಕ್ಷಗಾನ ಕಲಾವಿದರಿಂದ ಭರ್ಜರಿ ಸ್ವಾಗತ ಲಭಿಸಿತ್ತು. ಪ್ರವಾಸಿಗರಿಗೆ ವೈದ್ಯಕೀಯ ತಪಾಸಣೆ, ಬಹು ವಲಸೆ ಮತ್ತು ಕಸ್ಟಮ್ಸ್ ಕೌಂಟರ್‌ಗಳು, ಮಂಗಳೂರು ನಗರದ ಸುತ್ತಮುತ್ತ ಸಾರಿಗೆ ಬಸ್‌ಗಳು ಮತ್ತು ವಿಶೇಷ ಟ್ಯಾಕ್ಸಿಗಳು, ಆಯುಷ್ ಸಚಿವಾಲಯದ ಧ್ಯಾನ ಕೇಂದ್ರ, ವರ್ಚುಯಲ್ ರಿಯಾಲಿಟಿ ಅನುಭವ ವಲಯ, ಉಚಿತ ವೈಫೈ ಸೇರಿದಂತೆ ಹಲವು ಸಿದ್ಧತೆಗಳನ್ನು ಮಾಡಲಾಗಿತ್ತು.

ಕಾರ್ಕಳ ಗೋಮಟೇಶ್ವರ ದೇವಸ್ಥಾನ, ಮೂಡಬಿದ್ರಿಯ 1000 ಕಂಬಗಳ ಬಸದಿ, ಸೋನ್ಸ್ ಫಾರ್ಮ್, ಅಚಲ್ ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ, ಸೇಂಟ್ ಅಲೋಶಿಯಸ್ ಚಾಪೆಲ್, ಸ್ಥಳೀಯ ಮಾರುಕಟ್ಟೆ ಮತ್ತು ನಗರದ ಸಾಂಪ್ರದಾಯಿಕ ಮನೆಗಳಂತಹ ವಿವಿಧ ಪ್ರವಾಸಿ ತಾಣಗಳಿಗೆ ಪ್ರಯಾಣಿಕರು ಭೇಟಿ ನೀಡಿದರು. ಜೊತೆಗೆ ಸ್ಥಳೀಯ ತಂಡ ಯಕ್ಷಗಾನ ಪ್ರದರ್ಶನ ನೀಡಿ ಪ್ರವಾಸಿಗರನ್ನು ರಂಜಿಸಿತು.

ಮುಂದಿನ ಪ್ರಯಾಣವನ್ನು ಆರಂಭಿಸಿದ ಪ್ರವಾಸಿಗರಿಗೆ ಮಂಗಳೂರಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ವರ್ಣರಂಜಿತ ಸ್ಮರಣಿಕೆಗಳನ್ನು ನೀಡಲಾಯಿತು. ಸಂಜೆ 5 ಗಂಟೆಗೆ ಹಡಗು ತನ್ನ ಮುಂದಿನ ತಾಣವಾದ ಕೊಚ್ಚಿನ್ ಬಂದರಿಗೆ ಪ್ರಯಾಣ ಆರಂಭಿಸಿತು.

error: Content is protected !!