ಬೆಳ್ತಂಗಡಿ : ಕಳೆಂಜ ಮೀಸಲು ಅರಣ್ಯ ಭೂಮಿಯ ತಕರಾರು ವಿಚಾರ: ಹಕ್ಕುಬಾಧ್ಯತಾ ಸಮಿತಿಯಿಂದ ಇಂದು ವಿಡಿಯೋ ದಾಖಲೆ ಪರಿಶೀಲನೆ

ಬೆಳ್ತಂಗಡಿ : ಕಳೆಂಜದ ಮೀಸಲು ಅರಣ್ಯ ಪ್ರದೇಶದ ಜಾಗದ ತಕರಾರು ವಿಚಾರಕ್ಕೆ ಸಂಬಂಧಿಸಿದಂತೆ ಇಂದು (ಜ.11) ಹಕ್ಕುಬಾಧ್ಯತಾ ಸಮಿತಿಯಿಂದ ವಿಡಿಯೋ ದಾಖಲೆ ಪರಿಶೀಲನೆ ನಡೆಯಲಿದೆ.

ಮೀಸಲು ಅರಣ್ಯ ಪ್ರದೇಶದ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿದ್ದನ್ನು ತೆರವುಗೊಳಿಸಲು ಉಪ್ಪಿನಂಗಡಿ ಅರಣ್ಯ ಇಲಾಖೆ ಸಿಬ್ಬಂದಿಗಳು ಮುಂದಾದಾಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಎಮ್.ಎಲ್.ಸಿ ಪ್ರತಾಪ್ ಸಿಂಹ ನಾಯಕ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಮಧ್ಯೆ ನಡೆದ ಜಟಾಪಟಿ ಪ್ರಕರಣ ಹಕ್ಕುಬಾಧ್ಯತಾ ಸಮಿತಿಗೆ ನೀಡಲಾಗಿದ್ದು, ಇದರ ಮೊದಲ ಸಭೆ ಜನವರಿ 5 ರಂದು ಶಾಸಕರ ಭವನ ಕಟ್ಟಡ -1 ರ ನಾಲ್ಕನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ನಡೆದಿತ್ತು. ಈ ಪರಿಶೀಲನಾ ಸಭೆಗೆ ಉಪ್ಪಿನಂಗಡಿ ಅರಣ್ಯಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕರೆದು ಹೇಳಿಕೆ ಪಡೆದುಕೊಳ್ಳಲಾಗಿತ್ತು. ಇಂದು ಈ ಘಟನೆಯ ವಿಡಿಯೋ ದಾಖಲೆ ಪರಿಶೀಲನೆ ನಡೆಯಲಿದೆ.

ಹಕ್ಕುಬಾಧ್ಯತಾ ಸಮಿತಿಗೆ ವಿಧಾನ ಪರಿಷತ್ತಿನ ಹಕ್ಕುಬಾಧ್ಯತಾ ಸಮಿತಿಯ ಅಧ್ಯಕ್ಷರಾಗಿ ಎಂ.ನಾಗರಾಜು ಮತ್ತು ಸದಸ್ಯರುಗಳಾಗಿ ಉಮಾಶ್ರೀ, ಪ್ರದೀಶ್ ಶೆಟ್ಟರ್, ಆ.ದೇವೇಗೌಡ, ಬೆಳ್ತಂಗಡಿ ಎಮ್.ಎಲ್.ಸಿ ಹರೀಶ್ ಕುಮಾರ್ , ಕೆ.ಎ.ತಿಪ್ಪೇಸ್ವಾಮಿ, ಭೀಮರಾವ್ ಬಸವರಾಜ ಪಾಟೀಲ್ , ಡಾ|ಡಿ.ತಿಮ್ಮಯ್ಯ, ಅರುಣ್ ಡಿ.ಎಸ್ ಆಯ್ಕೆಯಾದ್ದು, ಇಂದು ನಡೆಯುವ ಸಭೆಯಲ್ಲಿ ಪ್ರತಾಪ್ ಸಿಂಹ ನಾಯಕ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ನಡೆದ ಜಟಪಟಿಯ ವಿಡಿಯೋ ದಾಖಲೆಯನ್ನು ಹಕ್ಕುಬಾಧ್ಯತಾ ಸಮಿತಿ ಪರಿಶೀಲನೆ ನಡೆಸಲಿದೆ.

error: Content is protected !!