ಶಬರಿಮಲೆಯಲ್ಲಿ ಭಾರೀ ಜನ ಸಂದಣಿ: ಪಂಪಾದಿಂದ ಹಿಂದಿರುಗಿದ ಮೈಸೂರಿನ ಸ್ವಾಮಿಗಳ ತಂಡ: ಬೆಳ್ತಂಗಡಿ ಅಯ್ಯಪ್ಪ ದೇವಸ್ಥಾನದಲ್ಲಿ ತುಪ್ಪದ ಅಭಿಷೇಕ: ಅವ್ಯವಸ್ಥೆಯಿಂದ ಬೇಸತ್ತ ಮಾಲಾಧಾರಿ ಅಯ್ಯಪ್ಪ ಭಕ್ತರು

ಬೆಳ್ತಂಗಡಿ: ಶಬರಿಮಲೆ ಯಾತ್ರೆ ಆರಂಭವಾದ ಕೆಲವೇ ದಿನಗಳಲ್ಲಿ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು ಈ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೆ ಇದೆ. ಈ ಮಧ್ಯೆ ಕೇರಳ ಸರ್ಕಾರ ಭಕ್ತಾಧಿಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿದೆ. ಇದರಿಂದ ಬೇಸತ್ತ ಮೈಸೂರಿನ ತಂಡವೊಂದು ಪಂಪಾದಿಂದ ಹಿಂತಿರುಗಿ ಬೆಳ್ತಂಗಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ತುಪ್ಪದ  ಅಭಿಷೇಕ ಮಾಡಿ ಊರಿಗೆ ಮರಳಿದ ಘಟನೆ ನಡೆದಿದೆ.

ಮೈಸೂರು ಸಮೀಪದ ನಂಜನ ಗೂಡಿನ 48 ಮಾಲಾಧಾರಿ ಸ್ವಾಮಿಗಳ ತಂಡ ಶಬರಿಮಲೆ ಯಾತ್ರೆ ಕೈಗೊಂಡಿತ್ತು. ಆದರೆ ಪಂಪಾ ಬಳಿ ಕುಡಿಯಲು ನೀರಿಲ್ಲದೇ, ಶೌಚಾಲಯ, ಆಹಾರಕ್ಕೂ ಸರಿಯಾದ ವ್ಯವಸ್ಥೆಗಳಿಲ್ಲದೇ ನೊಂದ ತಂಡ ಅಲ್ಲಿಂದ ಹಿಂತಿರುಗಿದೆ. ಈ ತಂಡದಲ್ಲಿದ್ದ 48 ಮಾಲಾಧಾರಿ ಸ್ವಾಮಿಗಳು ಬೆಳ್ತಂಗಡಿ ಸಂತೆಕಟ್ಟೆ ರಾಮ ನಗರದ ಅಯ್ಯಪ್ಪ ದೇವಸ್ಥಾನಕ್ಕೆ ಆಗಮಿಸಿ ತುಪ್ಪದ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿ ಊರಿಗೆ ಮರಳಿದ್ದಾರೆ.

ಶಬರಿಮಲೆ ಅವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಸ್ವಾಮಿಗಳು, ಹಲವು ದಿನಗಳಿಂದ ವೃತ್ತವನ್ನಾಚರಿಸಿ ಶಬರಿ ಮಲೆ ಯಾತ್ರೆ ಕೈಗೊಂಡ ಸ್ವಾಮಿಗಳಿಗೆ ಸರಿಯಾದ ವ್ಯವಸ್ಥೆಗಳನ್ನು ಕಲ್ಪಿಸಲು ಆಡಳಿತ ಮಂಡಳಿ ವಿಫಲವಾಗಿದೆ. ಎಲ್ಲದಕ್ಕೂ ಅಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.

error: Content is protected !!