ಅಂತ್ಯಸಂಸ್ಕಾರ ಮಾಡಲಾಗಿದ್ದ ವ್ಯಕ್ತಿ ಗ್ರಾಮದಲ್ಲಿ ಜೀವಂತ ಪ್ರತ್ಯಕ್ಷ..!: ಬೆಚ್ಚಿಬಿದ್ದ ಗ್ರಾಮಸ್ಥರು: ಕೇರಳದಲ್ಲಿ ಅಚ್ಚರಿಯ ಘಟನೆ..!

ಕೇರಳ : ಮೃತಪಟ್ಟ ಕೆಲವಷ್ಟು ವ್ಯಕ್ತಿಗಳು ಅಂತ್ಯಸಂಸ್ಕಾರದ ಕೊನೆಯ ವೇಳೆಯಲ್ಲಿ ಮತ್ತೆ ಜೀವ ಪಡೆದುಕೊಂಡಿರುವ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ. ಆದರೆ ಅಂತ್ಯಸಂಸ್ಕಾರ ಮಾಡಿ ಮುಗಿಸಿದ ಬಳಿಕ ಅದೇ ವ್ಯಕ್ತಿ ಗ್ರಾಮದಲ್ಲಿ ಪ್ರತ್ಯಕ್ಷವಾದ ಅಚ್ಚರಿಯ ಘಟನೆ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ.

ಲಾಹ ಮಂಜತೋಟಿಲ್‍ನ ಆದಿವಾಸಿ ಕಾಲೋನಿ ನಿವಾಸಿ ರಮನ್‍ಬಾಬು ಎಂಬವರು ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಡಿಸೆಂಬರ್ 30ರಂದು ನಿಲಕ್ಕಲ್ ಎಂಬಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಮೃತದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿತ್ತು. ಈ ಮೃತದೇಹ ರಮನ್ ಬಾಬು ಅವರದ್ದು ಎಂಬುದಾಗಿ ಶಂಕಿಸಿ, ಇವರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿತ್ತು. ರಸ್ತೆಯಲ್ಲಿ ಪತ್ತೆಯಾದ ಶವ ಮತ್ತು ಅದರ ಮೇಲಿನ ಬಟ್ಟೆಯನ್ನು ಗುರುತಿಸಿದ ಸಂಬಂಧಿಕರು ಇದು ರಮನ್ ಮೃತದೇಹ ಎಂದು ದೃಢಪಡಿಸಿದ್ದರು. ಜೊತೆಗೆ ರಮನ್ ಬಾಬು ಅವರ ಮಗ ಮೃತದೇಹವನ್ನು ಸರಿಯಾಗಿ ಗುರುತಿಸಿದ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ನಂತರ ಸಂಬಂಧಿಕರು ಈ ಮೃತದೇಹವನ್ನು ಮನೆಯಲ್ಲಿಯೇ ಅಂತ್ಯಸಂಸ್ಕಾರ ಮಾಡಿದ್ದರು.

ಮೃತಪಟ್ಟಿದ್ದ ಈ ವ್ಯಕ್ತಿ ಜನವರಿ 6ರಂದು ಮರಳಿ ಮನೆಗೆ ಬಂದಿದ್ದಾರೆ. ರಮನ್ ಬಾಬುರನ್ನು ಕಂಡ ಜನ ಬೆಚ್ಚಿಬಿದ್ದಿದ್ದಾರೆ. ಇವರ ಸಂಬಂಧಿಕರೊಬ್ಬರು ಕೊನ್ನಿ ಕೋಕ್ಕತ್ತೋಟ್ ಅರಣ್ಯ ಪ್ರದೇಶದಲ್ಲಿ ರಮನ್ ಬಾಬುರನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಇಬ್ಬರೂ ಮಂಜತ್ತೋಡ್ ಕಾಲೋನಿಯಲ್ಲಿರುವ ಮನೆಗೆ ಮರಳಿದ್ದಾರೆ. ಇದೀಗ ರಮನ್ ಬಾಬು ಎಂದು ನಿಲಕ್ಕಲ್‍ನಲ್ಲಿ ಪತ್ತೆಯಾದ ಅಪರಿಚಿತ ಶವವನ್ನು ತಪ್ಪಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಅಂತ್ಯಸಂಸ್ಕಾರ ಮಾಡಲಾದ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.

ರಮನ್ ಬಾಬು ಅವರಿಗೆ ಜ್ಞಾಪಕ ಶಕ್ತಿ ಕಡಿಮೆ ಇದ್ದು, ಅಲೆದಾಟ ನಡೆಸುತ್ತಿದ್ದರು. ಒಮ್ಮೆ ಊರು ಬಿಟ್ಟರೆ ಹಲವು ದಿನಗಳ ಬಳಿಕ ಮರಳಿ ಊರಿಗೆ ಬರುತ್ತಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

error: Content is protected !!