370ನೇ ವಿಧಿ ರದ್ದು : ಸುಪ್ರೀಂ ಕೋರ್ಟ್‍ನಿಂದ ಇಂದು ಮಹತ್ವದ ತೀರ್ಪು: ಕಾಶ್ಮೀರದಲ್ಲಿ ಬಿಗಿ ಭದ್ರತೆ: ಕೋರ್ಟ್ ತೀರ್ಪನ್ನು ರಾಜಕೀಯಗೊಳಿಸದಂತೆ ಬಿಜೆಪಿ ಸಲಹೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ರದ್ದತಿ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ. ಈ ಹಿನ್ನೆಲೆ ಕಾಶ್ಮೀರದಲ್ಲಿ ಅಧಿಕಾರಿಗಳು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಆಗಸ್ಟ್ 5, 2019 ರಂದು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ಕೇಂದ್ರವು ರದ್ದುಗೊಳಿಸಿ, ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂದು ವಿಭಜಿಸಿ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತು. ಈ ತೀರ್ಪಿನ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಹಲವು ಪಕ್ಷಗಳು ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದವು. ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ, ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಸೇರಿದಂತೆ ಐವರು ಸದಸ್ಯರ ಸಾಂವಿಧಾನಿಕ ಪೀಠವು ಈ ವರ್ಷದ ಆಗಸ್ಟ್ 2 ರಿಂದ ಅರ್ಜಿಗಳ ಮೇಲೆ ಸುದೀರ್ಘ ತನಿಖೆ ನಡೆಸಿ, ಸೆಪ್ಟೆಂಬರ್ 5ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಈ ಪ್ರಕರಣದ ತೀರ್ಪನ್ನು ನೀಡುವುದಾಗಿ ಸುಪ್ರೀಂ ಕೋರ್ಟ್ ತನ್ನ ವೆಬ್‍ಸೈಟ್‍ನಲ್ಲಿ ತಿಳಿಸಿದೆ.

ಭದ್ರತೆಯ ಹಿನ್ನಲೆ ಎರಡು ವಾರಗಳ ಕಾಲ ಪೊಲೀಸರು ಕಾಶ್ಮೀರ ಕಣಿವೆಯ 10 ಜಿಲ್ಲೆಗಳಲ್ಲಿ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು. ಈಗಾಗಲೇ ಪೊಲೀಸರು ಕೆಲವು ಮುಖಂಡರನ್ನು ವಶಕ್ಕೆ ಪಡೆದಿದ್ದು. ಅನೇಕರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಜನರನ್ನು ಪ್ರಚೋದಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಯಾರೂ ರಾಜಕೀಯಗೊಳಿಸಬಾರದು ಮತ್ತು ಎಲ್ಲರೂ ಗೌರವಿಸಬೇಕು ಎಂದು ಬಿಜೆಪಿ ಸಲಹೆ ನೀಡಿದೆ.

error: Content is protected !!