ಹೊಸದಿಲ್ಲಿ: ತಮ್ಮನ್ನು ‘ಮೋದಿಜೀ ಅಥವಾ ಆದರಣೀಯ (ಗೌರವಾನ್ವಿತ) ಮೋದಿಜೀ’ ಎಂದು ಸಂಬೋಧಿಸಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಬಿಜೆಪಿ ಸಂಸದರನ್ನು ಒತ್ತಾಯಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೀಯ ಪಕ್ಷದ ಸಭೆಯಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ತಮ್ಮ ಹೆಸರಿನ ಮೊದಲು ಅಥವಾ ನಂತರ ವಿಶೇಷಣಗಳನ್ನು ಸೇರಿಸುವುದರಿಂದ ಅವರ ಮತ್ತು ದೇಶದ ಜನರ ನಡುವೆ ಅಂತರವನ್ನು ಉಂಟುಮಾಡಬಹುದು ಎಂದು ಹೇಳಿದರು.
“ನಾನು ಪಕ್ಷದ ಸಣ್ಣ ಕಾರ್ಯಕರ್ತ ಮತ್ತು ನಾನು ಸಾಮಾನ್ಯ ಜನರ ಕುಟುಂಬದ ಭಾಗ ಎಂದು ಜನರ ಭಾವನೆಯಿದೆ. ಜನರು ನನ್ನನ್ನು ಅವರಲ್ಲಿ ಒಬ್ಬ ಎಂದು ಭಾವಿಸುವುದರಿಂದ ಶ್ರೀ ಅಥವಾ ಅದರಣೀಯದಂತಹ ವಿಶೇಷಣಗಳನ್ನು ಸೇರಿಸಬೇಡಿ.” ಎಂದು ಬಿಜೆಪಿ ಸಂಸದರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಪಕ್ಷದ ಗೆಲುವಿಗೆ ಟೀಮ್ ಸ್ಪಿರಿಟ್ ಕಾರಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಭಾರತ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಮುಂಬರುವ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ಯಲ್ಲಿ ಸಂಸದರು ಭಾಗವಹಿಸಬೇಕು ಎಂದು ಅವರು ಒತ್ತಾಯಿಸಿದರು. 2024 ರ ಸಾರ್ವತ್ರಿಕ ಚುನಾವಣೆಗೆ ತಿಂಗಳುಗಳ ಮುಂಚೆಯೇ ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ತೆಲಂಗಾಣ ಮತ್ತು ಮಿಜೋರಾಂನಲ್ಲಿ ಪಕ್ಷವು ತನ್ನ ಹಿಡಿತವನ್ನು ಬಲಪಡಿಸಿಕೊಂಡಿದೆ.