ಬೆಳ್ತಂಗಡಿ: ಹೃದಯ ಪರಿವರ್ತನೆಯಿಂದ ಅದ್ಭುತ ಪ್ರಗತಿ ಸಾಧ್ಯವಾಗುತ್ತದೆ. ಎಲ್ಲರನ್ನೂ ಜಯಿಸಿ ಸರ್ವರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಲಕ್ಷದೀಪೋತ್ಸವ ಸಂದರ್ಭದಲ್ಲಿ ಶುಕ್ರವಾರ ಶಿವನಾಮ ಸ್ಮರಣೆಯೊಂದಿಗೆ ಉಜಿರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ ಹತ್ತು ಸಾವಿರಕ್ಕೂ ಮಿಕ್ಕಿ ಭಕ್ತರನ್ನು ಅಭಿನಂದಿಸಿ ಮಾತನಾಡಿದರು.
ನಾವು ಎಲ್ಲರಲ್ಲಿಯೂ ಒಳ್ಳೆಯತನವನ್ನು ಕಾಣಬೇಕು. ದೋಷವನ್ನು ಹುಡುಕಬಾರದು. ಯಾವಾಗಲೂ ಕೆಟ್ಟ ಯೋಚನೆ ಮಾಡದೆ ಸದಾಶಯದೊಂದಿಗೆ ಸತ್ಕಾರ್ಯಗಳನ್ನೇ ಮಾಡಿದರೆ ಲೋಕಕಲ್ಯಾಣವಾಗುತ್ತದೆ. ಎಲ್ಲರಲ್ಲಿಯೂ ಪರಸ್ಪರ ಪ್ರೀತಿ-ವಿಶ್ವಾಸ, ನಂಬಿಕೆ ಮತ್ತು ಗೌರವ ಬೆಳೆಯುತ್ತದೆ. ದೇವರು ನನಗೆ ಕೊಟ್ಟ ಎಲ್ಲಾ ಅವಕಾಶಗಳನ್ನು ಮತ್ತು ಸಂಪತ್ತನ್ನು ಬಳಸಿ ಸತ್ಕಾರ್ಯಗಳನ್ನೇ ಮಾಡಿದ್ದೇನೆ. ಅಗಾಧ ಸಂಪತ್ತಿಗಿಂತ ಸತ್ಕಾರ್ಯಕ್ಕೆ ಮೌಲ್ಯ ಜಾಸ್ತಿ. ಎಲ್ಲರೂ ಸೇರಿ ಜೊತೆಯಾಗಿ ಸತ್ಕಾರ್ಯಗಳನ್ನೇ ಮಾಡೋಣ ಎಂದು ಅವರು ಕಿವಿಮಾತು ಹೇಳಿದರು.
ಧರ್ಮಸ್ಥಳದ ಬಗ್ಗೆ ಯಾವುದೇ ಅನುಮಾನ, ಸಂಶಯ ಬೇಡ. ನೇರವಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.
ಸಂಸದರ ನಿಧಿಯಿಂದ ತನಗೆ ಮಂಜೂರಾದ ಎರಡೂವರೆ ಕೋಟಿ ರೂ.. ಅನುದಾನವನ್ನು ಬೀದರ್ ಜಿಲ್ಲೆಗೆ ನೀಡಿದ್ದು ಅಲ್ಲಿ ಇದರಿಂದಾಗಿ ಕ್ಷೀರ ಕ್ರಾಂತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪಾದಯಾತ್ರೆ ಮೂಲಕ ಎಲ್ಲರೂ ನಿಮ್ಮ ಪ್ರೀತಿ-ವಿಶ್ವಾಸ, ಗೌರವ, ಭಕ್ತಿ ಮತ್ತು ಸಂತೋಷವನ್ನು ವ್ಯಕ್ತಪಡಿಸಿರುವಿರಿ. ಇದರಿಂದ ನನ್ನಲ್ಲಿ ತೃಪ್ತಿ, ಸಂತೋಷ ಮತ್ತು ಧನ್ಯತಾಭಾವ ಮೂಡಿಬಂದಿದೆ ಎಂದರು.
ಪಾದಯಾತ್ರಿಗಳ ಭೀಷ್ಮ ಪ್ರತಿಜ್ಞೆ:
ಪಾದಯಾತ್ರಿಗಳೆಲ್ಲ ಸಂಘಟನೆ ಮೂಲಕ ಸತ್ಯ, ಧರ್ಮ, ನ್ಯಾಯ ಮತ್ತು ನೀತಿಗಾಗಿ ತಾವೆಲ್ಲರೂ ಧರ್ಮಸ್ಥಳದ ಜೊತೆ ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಜೊತೆ ಸದಾ ಇದ್ದೇವೆ ಎಂದು ಸಾಮೂಹಿಕವಾಗಿ ದೃಢಸಂಕಲ್ಪದೊಂದಿಗೆ ಭೀಷ್ಮ ಪ್ರತಿಜ್ಞೆ ಮಾಡಿದರು.
ಹೇಮಾವತಿ ವಿ ಹೆಗ್ಗಡೆಯವರು, ಶ್ರದ್ಧಾ ಅಮಿತ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ನಿಶ್ಚಲ್ ಕುಮಾರ್, ಸೋನಿಯವರ್ಮ, ಪೂರನ್‌ವರ್ಮ, ಶರತ್‌ಕೃಷ್ಣ ಪಡ್ವೆಟ್ನಾಯ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ.ಎಸ್. ಸತೀಶ್ಚಂದ್ರ, ಎಸ್.ಡಿ.ಎಮ್. ಕಾಲೇಜು ಪ್ರಾಂಶುಪಾಲ ಕುಮಾರ ಹೆಗ್ಡೆ, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್. ಮಂಜುನಾಥ್, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ದನ್, ಎಸ್.ಡಿ.ಎಮ್ ಆಸ್ಪತ್ರೆಯ ನಿರ್ದೇಶಕ ಎಮ್. ಜನಾರ್ದನ ಸಿ.ಒ.ಒ. ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ವಕೀಲ ಬಿ.ಕೆ. ಧನಂಜಯ ರಾವ್ ಸ್ವಾಗತಿಸಿದರು. ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.