ಇಂದಿನಿಂದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ನೀರು ಮತ್ತು ವಿದ್ಯುತ್’ : ಸಿಎಂ ಘೋಷಣೆ

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಇಂದಿನಿಂದ ವಿದ್ಯುತ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಉಚಿತವಾಗಿ ನೀಡಲಾಗುತ್ತದೆ ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿಂದು ಶಿಕ್ಷಣ ಇಲಾಖೆ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಕನ್ನಡ ನಮ್ಮ ಮಾತೃಭಾಷೆ. ಈ ನೆಲದ ಭಾಷೆ. ಕೇಂದ್ರ ಸರ್ಕಾರ ಇಂದೂ ಕೂಡ ಹಿಂದಿ, ಇಂಗ್ಲಿಷ್‌ನಲ್ಲಿ ಕೇಂದ್ರದ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಸುತ್ತಿದೆ. ಇದಕ್ಕೆ ವಿರೋಧ ಮಾಡಬೇಕು. ಈ ಬಗ್ಗೆ ಪಿಎಂಗೆ ಪತ್ರ ಬರೆಯುತ್ತೇನೆ. ಮಕ್ಕಳಿಗೆ ಗೊತ್ತಿರುವ ಭಾಷೆಯಲ್ಲಿ ಪರೀಕ್ಷೆ ಮಾಡಬೇಕಿದೆ ಎಂದರು.

ಸರ್ಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳ ತಪ್ಪಿಸಿ ಖಾಸಗಿ ಶಾಲೆಗೆ ಇಂಗ್ಲೀಷ್ ಮಾಧ್ಯಮಕ್ಕೆ ಸೇರಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇಂಗ್ಲೀಷ್ ಮಾಧ್ಯಮದಲ್ಲಿ ಓದಿದರೆ ಮೇಧಾವಿ ಆಗಲಿದ್ದೇವೆ. ಉದ್ಯೋಗ ಸಿಗಲಿದೆ ಎನ್ನುವುದು ಸರಿಯಾದ ತಿಳುವಳಿಕೆ ಅಲ್ಲ. ನಮ್ಮ ರಾಜ್ಯದ ಅನೇಕ ವಿಜ್ಞಾನಿಗಳು ಕನ್ನಡದಲ್ಲೇ ಓದಿ ವಿಖ್ಯಾತರಾಗಿದ್ದಾರೆ. ಕನ್ನಡ ಮಾಧ್ಯಮದ ನಮ್ಮ ಕಲ್ಪನೆಗೆ ಕೋರ್ಟ್ ಸಹಕಾರ ಕೊಡುತ್ತಿಲ್ಲ. ಮಕ್ಕಳು ಯಾವ ಮಾಧ್ಯಮದಲ್ಲಿ ಓದಬೇಕು ಎಂದು ಪೋಷಕರ ಇಚ್ಛೆಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಹಾಗಾಗಿ ಕನ್ನಡ ಮಾಧ್ಯಮದ ನಮ್ಮ ಆಶಯ ಈಡೇರಿಲ್ಲ. ಇದರ ಬದಲಾವಣೆಗೆ ಯತ್ನಿಸುತ್ತೇವೆ ಎಂದರು.

ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ಕೂಡ ನೀಡುವುದು ಅಗತ್ಯವಿದೆ. ಕನಿಷ್ಠ ಎಸ್.ಎಸ್.ಎಲ್.ಸಿವರೆಗಾದರೂ ಕನ್ನಡ ಮಾಧ್ಯಮದಲ್ಲಿ ಓದಬೇಕು ಎಂದು ಕರೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ಶಾಲೆಗಳಲ್ಲಿ ಉಚಿತ ವಿದ್ಯುತ್, ಕುಡಿಯುವ ನೀರು ಸೌಲಭ್ಯಕ್ಕೆ ಶಿಕ್ಷಕರು ಮನವಿ ಮಾಡಿದ್ದಾರೆ. ಅದನ್ನು ಪರಿಗಣಿಸಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ವಿದ್ಯುತ್ ಮತ್ತು ಕುಡಿಯುವ ನೀರನ್ನು ಕೊಡುತ್ತೇವೆ ಎಂದು ಭರವಸೆ ನೀಡಿದರು.

error: Content is protected !!