ಚಂದ್ರನ ದಕ್ಷಿಣ ಧ್ರುವ ಗೆದ್ದ ಭಾರತ: ಸೂರ್ಯನ ಮೇಲೂ ಇಸ್ರೋ ಟಾರ್ಗೆಟ್: ಕಾರ್ಯಾಚರಣೆಗೆ ಸಿದ್ಧವಾದ ಆದಿತ್ಯ-ಎಲ್1..!


ಬೆಂಗಳೂರು:
ಭಾರತ ಸೇರಿ ಚಂದ್ರನ ಮೇಲೆ ಒಟ್ಟು 4 ದೇಶಗಳು ಪಾದಾರ್ಪಣೆ ಮಾಡಿದೆ. ಆದರೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಮೊಟ್ಟ ಮೊದಲ ದೇಶ ನಮ್ಮ ಭಾರತ. ಆ.23ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಯುವ ಮೂಲಕ ಇಸ್ರೋ ವಿಜ್ಞಾನಿಗಳ ಶ್ರಮಕ್ಕೆ ಪ್ರತಿಫಲ ಸಿಕ್ಕಂತಾಗಿದೆ. ಅಲ್ಲದೆ ನೆರೆಯ ರಾಷ್ಟ್ರಗಳೂ ‘ಶಭಾಷ್ ಭಾರತ’ ಎನ್ನುವಂತೆ ಮಾಡಿದೆ. 4 ವರ್ಷಗಳ ಶ್ರಮದಿಂದ ಚಂದ್ರನ ಅಂಗಳದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿದೆ. ಈ ಯಶಸ್ಸಿನ ಬೆನ್ನಲ್ಲೆ ಇಸ್ರೋ ನಮ್ಮ ಮುಂದಿನ ಗುರಿ ‘ಸೂರ್ಯ’ ಎಂದು ತಿಳಿಸಿದೆ.

ಸೂರ್ಯನ ಮೇಲೆ ಇಸ್ರೋ ಟಾರ್ಗೆಟ್ : ಅದೆಷ್ಟೋ ಲಕ್ಷಾಂತರ ದೂರದಲ್ಲಿರುವ ಸೂರ್ಯನ ಶಾಖ ನಮ್ಮ ಮೈಗೆ ಸೋಕಿದರೆ ಮೈ ಸುಡುತ್ತದೆ. ಈ ಸುಡುವ ಶಾಖದ ಎದುರು ಸೂರ್ಯನ ಮೇಲೆ ಇಸ್ರೋ ಯಾವ ಸಾಧನೆ ಮಾಡಲಿದೆ..? ಇದು ಸಾಧ್ಯಾನ..? ಎಂಬ ಅನುಮಾನ ಖಂಡಿತ ಕಾಡುತ್ತೆ. ಆದರೆ ಈ ಸಾಧನೆಗೆ ಈಗಾಗಲೆ ಇಸ್ರೋ ಸಿದ್ಧವಾಗಿದೆ. ಈ ವಿಶೇಷ ಕಾರ್ಯಾಚರಣೆಯೇ ಆದಿತ್ಯ-ಎಲ್1 . ಇದರ ಭಾಗವಾಗಿ, ಸೂರ್ಯ-ಭೂಮಿಯ ವ್ಯವಸ್ಥೆಯಲ್ಲಿ ಲಗ್ರೇಂಜ್ ಪಾಯಿಂಟ್ 1 (ಐ1) ನಲ್ಲಿ ಬಾಹ್ಯಾಕಾಶ ನೌಕೆಯನ್ನು ನಿಯೋಜಿಸಲು ಇಸ್ರೋ ನಿರ್ಧರಿಸಿದೆ. ಇದು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುತ್ತದೆ. ಆದಿತ್ಯ-ಎಲ್1 ಭಾಗವಾಗಿ ಒಟ್ಟು 7 ಪೇಲೋಡ್‌ಗಳನ್ನು ಸೂರ್ಯನತ್ತ ಕಳುಹಿಸಲು ಯೋಜನೆ ಸಿದ್ಧವಾಗಿದೆ. ಇದರ ಜೊತೆಗೆ ಮಂಗಳಯಾನ, ಮಾನವ ಸಹಿತ ಗಗನಯಾನ ಇಸ್ರೋ ಮುಂದಿರುವ ಸಾಧನೆಗಳು.

ಮಂಗಳ ಗ್ರಹಕ್ಕೆ ಆರ್ಬಿಟರ್‌ನ್ನು ಯಶಸ್ವಿಯಾಗಿ ಕಳುಹಿಸಿರುವ ವಿಜ್ಞಾನಿಗಳು ಮುಂದೆ ಶುಕ್ರನ ದೂರದ ಭಾಗಕ್ಕೂ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲು ಯೋಜನೆಯೊಂದನ್ನು ರೂಪಿಸುತ್ತಿದೆ. ಮುಂದಿನ ವರ್ಷ ಗಗನಯಾನ ಕೈಗೆತ್ತಿಕೊಳ್ಳಲಾಗುವುದು ಎಂಬ ಸೂಚನೆಯನ್ನು ಇಸ್ರೋ ನೀಡಿದೆ. ಹೀಗಾಗಿ ಮೂವರು ಭಾರತೀಯ ಗಗನಯಾತ್ರಿಗಳು ಈಗಾಗಲೇ ತಮ್ಮ ತರಬೇತಿ ಪೂರ್ಣಗೊಳಿಸಿದ್ದು ಮುಂದೆ ರೋಡ್ಸ್ ನಲ್ಲಿ  ಮೂರು ದಿನಗಳನ್ನು ಕಳೆಯಲಿದ್ದಾರೆ.

ಚಂದ್ರನ ಅಂಗಳದಲ್ಲಿ ಇಸ್ರೋ ವಿಜ್ಞಾನಿಗಳಿಗೆ ಸಿಕ್ಕ ಒಂದು ದೊಡ್ಡ ಯಶಸ್ಸು ಮುಂದಿನ ಸಾಧನೆಗಳಿಗೆ ಶಕ್ತಿ ತುಂಬಿದ್ದು ಸುಳ್ಳಲ್ಲ.

error: Content is protected !!