ಬೆಳ್ತಂಗಡಿ; ಬೆಳಾಲು ಗ್ರಾಮದ ಮಾಯಾ ಅತ್ರಿಜಾಲು ಮನೆಯ ತಮ್ಮಯ ಗೌಡ (46) ಜು.13ರಂದು ಕೆರೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಜು.12 ಸಂಜೆಯಿಂದ ಕಾಣೆಯಾಗಿದ್ದ ತಮ್ಮಯ ಗೌಡರನ್ನು ಮನೆಯವರು ಹುಡುಕಿದ್ದು ಆದರೂ ಸಿಗದೆ ಇದ್ದಾಗ ಬೆಳಾಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಹರೀಶ ಕೂಡಿಗೆಯವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸೇವಾಪ್ರತಿನಿಧಿ ಆಶಾರವರ ನೇತೃತ್ವದಲ್ಲಿ ಯಶೋಧರ ಮಂಡಾಲು, ಸುಲೈಮಾನ್ ಬೆಳಾಲು, ಸಂತೋಷ ಕನೆಕ್ಕಿಲ ಹಾಗೂ ಊರಿನವರೊಂದಿಗೆ ಸೇರಿಕೊಂಡು ಹುಡುಕಾಡುವಾಗ ಸಮೀಪದ ಕೆರೆಯ ಬಳಿ ಒಂದು ಟಾರ್ಚ್ ಲೈಟ್ ಕಾಣಸಿಕ್ಕಿತ್ತು.
ಕೆರೆಗೆ ಬಿದ್ದಿರುವ ಸಂಶಯದಿಂದ ಆಳವಾದ ಕೆರೆಯಲ್ಲಿ ಹುಡುಕುವ ಪ್ರಯತ್ನ ಮಾಡಲಾಯಿತು. ಮೊದಲ ಪ್ರಯತ್ನ ವಿಫಲವಾದಾಗ ಆಕ್ಸಿಜನ್ ಸಿಲಿಂಡರ್‌ನ್ನು ಬಳಸಿ ಕೆರೆಗೆ ಇಳಿಯಲು ರಾಜ್ಯದ ಪ್ರಸಿದ್ಧ ಮುಳುಗುತಜ್ಞ ಈಶ್ವರ್ ಮಲ್ಪೆಯವರಿಗೆ ಕರೆ ಮಾಡಲಾಯಿತು. ಅವರು ಕೂಡಲೇ ಮಲ್ಪೆಯಿಂದ ಹೊರಟು ಅರ್ಧ ದಾರಿಗೆ ತಲುಪುವಾಗ ಕೂಡಿಗೆ ಹರೀಶರವರು ದೋಟಿಯ ಸಹಾಯದಿಂದ ಕೆರೆಯಲ್ಲಿ ಹುಡುಕಾಡಿದಾಗ ಮೃತದೇಹ ನೀರಿನಿಂದ ಮೇಲೆ ಬಂತು. ಹೀಗಾಗಿ ಈಶ್ವರ್ ಮಲ್ಪೆಯವರನ್ನು ಕಾರ್ಕಳದಿಂದ ವಾಪಾಸ್ ಕಳಿಸಲಾಯಿತು. ಬಳಿಕ ಧರ್ಮಸ್ಥಳ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿ, ಎ ಎಸ್ ಐ ಬಾಲಕೃಷ್ಣರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶಶಿಧರ್ ಮತ್ತು ಅಭಿಜಿತ್‌ರವರು ಸ್ಥಳಕ್ಕೆ ಬಂದು ಮಹಜರು ಮಾಡಿದ ಬಳಿಕ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು.
ಸರಕಾರಿ ಆಸ್ಪತ್ರೆಯ ಪ್ರಸಿದ್ಧ ಎಲುಬು ತಜ್ಞರಾಗಿರುವ ಡಾಕ್ಟರ್ ಶಶಿಕಾಂತ್ ಡೋಂಗ್ರೆಯವರು ಪೋಸ್ಟ್ ಮಾರ್ಟಮ್ ಪ್ರಕ್ರಿಯೆಗಳನ್ನು ಶೀಘ್ರವಾಗಿ ಮುಗಿಸಿ, ಬಳಿಕ ಮೃತದೇಹವನ್ನು ಮನೆಯವರ ಸುಪರ್ದಿಗೆ ಬಿಟ್ಟು ಕೊಡಲಾಯಿತು. ಶೌರ್ಯ ಘಟಕದ ಸುಲೈಮಾನ್ ಬೆಳಾಲುರವರು ಆಸ್ಪತ್ರೆಯಲ್ಲಿ ಮನೆಯವರೊಂದಿಗೆ ಇದ್ದು ಪೂರ್ತಿ ಸಹಕಾರ ನೀಡಿದರು.