ಹಳ್ಳಿ ಮಕ್ಕಳ ಡಾನ್ಸ್ ಕನಸಿಗೆ ಬಣ್ಣ ತುಂಬಿದ ಡಾನ್ಸ್ ಮಾಸ್ಟರ್ ಸಹನ್ ಎಂ.ಎಸ್

ಡಾನ್ಸ್ ಮಾಸ್ಟರ್ ಸಹನ್ ಎಂ.ಎಸ್

ಮಕ್ಕಳಲ್ಲಿ ಹೆತ್ತವರು ಕನಸು ತುಂಬುವ ಬದಲು ಮಕ್ಕಳ ಕನಸ್ಸನ್ನು ನನಸು ಮಾಡಲು ಹೆತ್ತವರು ಹೆಗಲು ಕೊಟ್ಟರೆ ಮಕ್ಕಳು ಗುರಿ ಸಾಧಿಸುವುದರಲ್ಲಿ ಅನುಮಾನ ಇಲ್ಲ ಎಂಬುದಕ್ಕೆ ಡಾನ್ಸ್ ಮಾಸ್ಟರ್ ಸಹನ್ ಎಂ.ಎಸ್ ನಿದರ್ಶನ. ತಂಗಿ, ಡಾನ್ಸ್ ಸ್ಕೂಲ್ ಸೇರಿಕೊಂಡು ಡಾನ್ಸ್ ಮಾಡುವಾಗ ನನಗೂ ಡಾನ್ಸ್ ಕಲಿಬೇಕು ಎಂಬ ಆಸೆ ಸಹನ್ ಅವರಲ್ಲಿ ಹುಟ್ಟಿದ್ದು 8ನೇ ತರಗತಿಯಲ್ಲಿರುವಾಗ. ತನ್ನ ಆಸೆಯನ್ನು ಅಪ್ಪನ ಜೊತೆ ಹೇಳಿಕೊಂಡ ಅಪ್ಪನೂ ಸೈ ಅಂದ್ರು. ಸ್ವಲ್ಪನೂ ಡಾನ್ಸ್ ಮಾಡಲು ಬಾರದ ಇವರವನ್ನು ಇವರ ಗುರುಗಳಾದ ಕೃಷ್ಣ ಕುಮಾರ್ ಅವರು ಚಿಕ್ಕ ಮಕ್ಕಳ ಬ್ಯಾಚ್ ಜೊತೆ ಸೇರಿಸಿಕೊಂಡರು. ತನ್ನ ಸ್ನೇಹಿತರು ದೊಡ್ಡವರ ಬ್ಯಾಚ್‌ನಲ್ಲಿ, ತಾನು ಚಿಕ್ಕ ಮಕ್ಕಳ ಬ್ಯಾಚ್‌ನಲ್ಲಿರೋದು ಸಹನ್ ಅವರಿಗೆ ನೋವಾಯಿತು. ಆದರೆ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ, ಪ್ರತೀ ನಿತ್ಯ ಡಾನ್ಸ್ ಕಲಿಯಲು ಆರಂಭಿಸಿದರು. ಮುಂದೆ ಸ್ಟಂಟ್ ಕಲಿತು, ತನ್ನ ಪಾಡಿಗೆ, ವಿಭಿನ್ನ ರೀತಿಯಲ್ಲಿ ಡಾನ್ಸ್ ಮಾಡಲು ಕಲಿತುಕೊಂಡರು. ಮಗನ ಬೆಳವಣಿಗೆ ನೋಡಿದ ತಂದೆ ನೀನೆ ಯಾಕೇ ಒಂದು ಡಾನ್ಸ್ ಕ್ಲಾಸ್ ಮಾಡಬಾರದು ಎಂದು ಕೇಳಿ ಮಗನ ಡಾನ್ಸ್ ಕನಸಿಗೆ ಮತ್ತಷ್ಟು ಬಲ ತುಂಬಿ ಹೊಸ ಡಾನ್ಸ್ ಕ್ಲಾಸ್ ಆರಂಭಿಸಿದರು.

2016 ರಲ್ಲಿ ಮಾಚಾರ್ ಎಂಬಲ್ಲಿ ಡಾನ್ಸ್ ಮಾಸ್ಟರ್ ಸಹನ್ ಅವರು 20 ಮಕ್ಕಳನ್ನೊಳಗೊಂಡ ಡಾನ್ಸ್ ತಂಡವನ್ನು ಕಟ್ಟಿ, ಅಲ್ಲಿ ಮಕ್ಕಳಿಗೆ ಡಾನ್ಸ್ ಹೇಳಿಕೊಡಲು ಆರಂಭಿಸಿದ್ರು. 6 ವರ್ಷದಲ್ಲಿ ಹಲವಾರು ಟಿವಿ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿ, ಬೆಸ್ಟ್ ಪರ್ಫಾಮರ್ ಎನಿಸಿಕೊಂಡು, ಅನೇಕ ಡಾನ್ಸ್ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಬಾಚಿಕೊಂಡಿದ್ದಾರೆ. ಝಿ ಕನ್ನಡದ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋ ನಲ್ಲಿ ಮಿಂಚಿದ ಕ್ಷಿತಿ ಕೆ ರೈ ಧರ್ಮಸ್ಥಳ, ಕಾಂತಾರ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡ ಸೃಷ್ಟಿ ಕೊಯ್ಯೂರು, ಸ್ಟಾರ್ ಸುವರ್ಣ ವಾಹಿನಿಯ ಬಾಲನಟಿ ಅನನ್ಯಾ ವಿ.ಎಸ್ ಇವರೆಲ್ಲರೂ ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ನಲ್ಲಿಯೂ ನೃತ್ಯ ಕಲಿತರು. ವೆಸ್ಟರ್ನ್ , ಫ್ರೀ ಸ್ಟೈಲ್, ಹಿಪ್ ಹಾಪ್ ಮತ್ತು ಸ್ಟಂಟ್ಸ್, ಸೆಮಿಕ್ಲಾಸಿಕಲ್, ಫೋಕ್, ಕಂಟೆಂಪರರಿ ಹೀಗೆ ವಿಭಿನ್ನ ರೀತಿಯ ಡಾನ್ಸ್ ಹೇಳಿಕೊಡುವಲ್ಲಿ ಡಾನ್ಸ್ ಮಾಸ್ಟರ್ ಸಹನ್ ಸಕ್ಕತ್ ಫೇಮಸ್. ಈಗ ತನ್ನ ಹಿಪ್ ಬಾಯ್ಸ್ ಡಾನ್ಸ್ ಕ್ರೀವ್ ಗರಡಿಯಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಾನ್ಸ್ ಕಲಿಯುತ್ತಿದ್ದಾರೆ.

ಕೊರಿಯೋಗ್ರಾಫರ್ ಸಹನ್ ಡಾನ್ಸ್ ಮಾಡೋದು ಮಾತ್ರವಲ್ಲ, ಎಂ.ಕಾಂ ಮುಗಿಸಿಕೊಂಡು ಲೆಕ್ಚರ್ ಆಗೋ ಕನಸು ಕಟ್ಟಿಕೊಂಡಿದ್ದಾರೆ. ಇದರ ಜೊತೆಗೆ ವಿಡಿಯೋ ಎಡಿಟಿಂಗ್, ಆಕರ್ಷಕ ಪೋಸ್ಟರ್ ಡಿಸೈನ್ ಮಾಡೋ ಹವ್ಯಾಸವೂ ಇದೆ. ಹೆಚ್.ಬಿ ಮೋಹನ್ ಹಾಗೂ ಶಾಂತ ಅವರ ಮಗನಾದ ಇವರು ತನ್ನ ಡಾನ್ಸ್ ಕ್ಲಾಸ್ ಕನಸನ್ನು ಇನ್ನಷ್ಟು ಗಟ್ಟಿಗೊಳಿಸಲು ಉಜಿರೆಯಲ್ಲಿ ಜು.09ರಂದು ಹೊಸದಾದ ನೃತ್ಯ ತರಗತಿ ಕೋಣೆಯನ್ನು ಶುಭಾರಂಭಿಸಿದ್ದಾರೆ. ಉಜಿರೆ ಗ್ರಾಮ ಪಂ. ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆಯ ಮಾಲಕರಾದ ಕೆ ಮೋಹನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಜಿರೆಯ ಸಂಧ್ಯಾ ಟ್ರೇಡರ್ಸ್ ನ ಮಾಲಕರಾದ ರಾಜೇಶ್ ಪೈ, ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ವೇಣೂರು, ಗ್ರಾಮ ಪಂಚಾಯತಿ ಸದಸ್ಯರಾದ ಮಂಜು ಮುಂಡತ್ತೋಡಿ ಉಪಸ್ಥಿತರಿದ್ದರು.

ತಾಲೂಕಿನ ಶಾಸಕರಾದ ಹರೀಶ್ ಪೂಂಜರವರು ಆಗಮಿಸಿ ಶುಭಹಾರೈಸಿದ್ದಾರೆ. ಇದೇ ವೇಳೆ ತಮ್ಮ ಸಂಸ್ಥೆಯಲ್ಲಿ ಕಲಿತ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಗೌರವಿಸಿದ್ದಾರೆ.


ಹಳ್ಳಿಯೊಳಗೆ ಹಳ್ಳಿಮಕ್ಕಳ ಡಾನ್ಸ್ ಕನಸಿಗೆ ಬಣ್ಣ ತುಂಬಿದ ಡಾನ್ಸ್ ಮಾಸ್ಟರ್ ಸಹನ್ ಹಳ್ಳಿ ಮಕ್ಕಳು ರಾಜ್ಯದಲ್ಲಿಯೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಂತೆ ಮಾಡಲು ಶಕ್ತಿ ತುಂಬಿದ್ದಾರೆ. ಈವರೆಗೆ ಒಂದು ಸಾವಿರಕ್ಕಿಂತಲೂ ಅಧಿಕ ಮಕ್ಕಳಿಗೆ ಡಾನ್ಸ್ ಕಲಿಸಿಕೊಟ್ಟು ತಾನೂ ಬೆಳೆಯುತ್ತಾ, ತನ್ನ ಸುತ್ತಲಿನ ಮಕ್ಕಳನ್ನೂ ಬೆಳೆಸುತ್ತಾ ಸಾಧನೆಯ ಹಾದಿ ಹಿಡಿದಿದ್ದಾರೆ.

ಅಪ್ಪನ ಬದುಕು ಮಗನಿಗೆ ದಾರಿದೀಪವಾದರೆ, ಮಗನ ಸಾಧನೆ ಸಾವಿರಕ್ಕೂ ಅಧಿಕ ಮಕ್ಕಳ ಡಾನ್ಸ್ ಕನಸಿನ ಸಾಕಾರಕ್ಕೆ ಅವಕಾಶ ನೀಡಿದೆ.

error: Content is protected !!