ಐಕ್ಯತೆಯನ್ನು ಹೆಚ್ಚಿಸುವಲ್ಲಿ ಭಗವಂತನ ಶ್ರೀ ರಕ್ಷೆ ಇರಲಿ:ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ: ವೇಣೂರು ಮಹಾಮಸ್ತಕಾಭಿಷೇಕದ ಕಾರ್ಯಾಲಯ ಉದ್ಘಾಟನೆ:ವೆಬ್ ಸೈಟ್ ಅನಾವರಣ:

 

 

ಬೆಳ್ತಂಗಡಿ: ಅಹಿಂಸೆ, ತ್ಯಾಗ, ಪ್ರಗತಿಯ ಧ್ಯೋತಕವಾಗಿ ಶ್ರೀ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನೆರವೇರಲಿದೆ. ಮಹಾಮಸ್ತಕಾಭಿಷೇಕದಿಂದ ಇಡೀ ಜಿಲ್ಲೆಗೆ ಮಜ್ಜನವಾಗಲಿದ್ದು, ಐಕ್ಯತೆ, ಒಗ್ಗಟ್ಟಿನಿಂದ ಮಹಾಮಸ್ತಕಾಭಿಷೇಕವನ್ನು ಅತ್ಯಂತ ಯಶಸ್ವಿಗೊಳಿಸೋಣ. ನಮ್ಮ ಐಕ್ಯತೆಯನ್ನು ಹೆಚ್ಚಿಸುವಲ್ಲಿ ಭಗವಂತನ ಶ್ರೀ ರಕ್ಷೆ ಇರಲಿ ಎಂದು ಮೂಡಬಿದಿರೆ ಜೈನಮಠದ ಡಾ| ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ನುಡಿದರು.

2024ರ ಫೆ. 22ರಿಂದ ಮಾ.1ರವರೆಗೆ ವೇಣೂರು ಶ್ರೀ ಬಾಹುಬಲಿ ಸ್ವಾಮಿಗೆ ಜರಗಲಿರುವ ಮಹಾಮಸ್ತಕಾಭಿಷೇಕದ ಪ್ರಯುಕ್ತ ರವಿವಾರ ಇಲ್ಲಿಯ ಯಾತ್ರಿ ನಿವಾಸದಲ್ಲಿ ಜರಗಿದ ಮಹಾಮಸ್ತಕಾಭಿಷೇಕದ ಕಾರ್ಯಾಲಯ ಉದ್ಘಾಟನೆ ಹಾಗೂ ವೆಬ್‌ಸೈಟ್ ಅನಾವರಣ ಕಾರ್ಯಕ್ರಮದಲ್ಲಿ ಕಾರ್ಯಾಲಯ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಮಹಾಮಸ್ತಕಾಭಿಷೇಕದ ಕಾರ್ಯಾಧ್ಯಕ್ಷರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ದೀಪ ಪ್ರಜ್ವಲಿಸಿ ಮಾತನಾಡಿ, ಮೂಡಬಿದಿರೆ ಭಟ್ಟಾರಕ ಶ್ರೀಗಳ ಮಾರ್ಗದರ್ಶನದಲ್ಲಿ, ಧರ್ಮಸ್ಥಳದ ಡಾ| ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಸಮಸ್ತ ಜೈನ ಬಾಂಧವರ ಸಹಕಾರದಿಂದ ಈ ಸಲದ ಮಸ್ತಕಾಭಿಷೇಕವೂ ಯಶಸ್ವಿಯಾಗಿ ನೆರವೇರಲಿದೆ. ಹಂತಹಂತವಾಗಿ ಮಸ್ತಕಾಭಿಷೇಕದ ವಿಚಾರದಲ್ಲಿ ಮುಂದುವರಿಯುತ್ತೇವೆ. ಪೂರ್ವಜನರ ಸಂಪ್ರದಾಯದಂತೆ ಈ ಸಲವೂ ಸಾಯಂಕಾಲವೇ ಮಹಾಮಸ್ತಕಾಭಿಷೇಕಗಳು ನೆರವೇರಲಿದೆ ಎಂದರು.

 

 

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ವೈಬ್‌ಸೈಟ್ ಅನಾವರಣಗೊಳಿಸಿ ಮಾತನಾಡಿ, ವೇಣೂರು ಮಹಾಮಸ್ತಕಾಭಿಷೇಕದಲ್ಲಿ ರಾಜ್ಯ ಸರಕಾರ ಕೊಂಡಿಯಾಗಿ ಸಹಕಾರ ನೀಡಬೇಕೆಂದು ಮುಖ್ಯಮಂತ್ರಿಯವರಲ್ಲಿ ವಿನಂತಿಸಿದ್ದೇನೆ. ಜೈನಪರಂಪರೆಯನ್ನು ಇಡೀ ನಾಡಿಗೆ ತಿಳಿಸುವ ಕಾರ್ಯ ಮಹಾಮಸ್ತಕಾಭಿಷೇಕದಿಂದ ಆಗಲಿ ಎಂದರು. ಮಹಾಮಸ್ತಕಾಭಿಷೇಕ ಸಮಿತಿಯ ಕೋಶಾಧಿಕಾರಿ ಪಿ. ಜಯರಾಜ್ ಕಂಬಳಿ ಉಪಸ್ಥಿತರಿದ್ದರು.

ಮಹಾಮಸ್ತಕಾಭಿಷೇಕ ಮಹೋತ್ಸವದ ವಾಹನ ಸ್ಟಿಕ್ಕರ್ ಬಿಡುಗಡೆಗೊಳಿಸಲಾಯಿತು. ಮಹಾಮಸ್ತಕಾಭಿಷೇಕದ ಮೊದಲ ದೇಣಿಗೆಯಾಗಿ ನೀಡಿದ ಪ್ರಸನ್ನಾ ಆರ್. ಅವರಿಗೆ ರಶೀದಿ ಹಸ್ತಾಂತರಿಸಲಾಯಿತು. ಬೆಳಗಾವಿ ನಂದಿಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ನಿಧನಕ್ಕೆ ಮೌನಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮಾ| ಸರ್ವಾರ್ಥ್ ಜೈನ್ ಪ್ರಾರ್ಥಿಸಿ, ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ್‌ಕುಮಾರ್ ಇಂದ್ರ ಸ್ವಾಗತಿಸಿ, ಶ್ರೀ ದಿಗಂಬರ ತೀರ್ಥಕ್ಷೇತ್ರ ಸಮಿತಿಯ ಜತೆ ಕಾರ್ಯದರ್ಶಿ ಮಹಾವೀರ ಜೈನ್ ಮೂಡುಕೋಡಿಗುತ್ತು ನಿರೂಪಿಸಿ, ವಂದಿಸಿದರು.

error: Content is protected !!