ಮಧ್ಯಪ್ರದೇಶ: ಬುಡಕಟ್ಟು ಸಮುದಾಯದ ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿತ್ತು. ಪ್ರಕರಣದ ಆರೋಪಿಯನ್ನು ಬಂಧಿಸಿ, ಆತನ ಅಕ್ರಮ ಒತ್ತುವರಿ ಕಟ್ಟಡವನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಲಾಗಿದೆ. ಅಷ್ಟೇ ಅಲ್ಲದೆ ಇಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಂತ್ರಸ್ತನನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಆತನ ಕಾಲುಗಳನ್ನು ತೊಳೆದು, ಘಟನೆಗೆ ಕ್ಷಮೆ ಕೋರಿದ್ದಾರೆ. ಈ ಘಟನೆಯ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿಯೇ ಮತ್ತೊಂದು ಹೀನ ಕೃತ್ಯ ನಡೆದಿದೆ.
23 ಮತ್ತು 24 ವರ್ಷದ ಇಬ್ಬರು ದಲಿತ ಯುವಕರ ಮೇಲೆ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಹೊರಿಸಿ ಬಲವಂತವಾಗಿ ಮಲ ತಿನ್ನಿಸಿದ ಕೃತ್ಯ ಶಿವಪುರಿಯಲ್ಲಿ ಜುಲೈ 7ರಂದು ವರದಿಯಾಗಿದೆ. ಸ್ಥಳೀಯ ಪೊಲೀಸರ ತನಿಖೆಯ ನಂತರ ಯುವಕರ ಮೇಲಿರುವ ಲೈಂಗಿಕ ದೌರ್ಜನ್ಯದ ಆರೋಪಗಳು ಆಧಾರ ರಹಿತವೆಂದು ದೃಢಪಡಿಸಿದ್ದು ಆಸ್ತಿ ಸಂಬಂಧಿತ ವಿವಾದಕ್ಕೆ ಆರೋಪಿಗಳು ಹೀಗೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.
ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿ ಪ್ರಕರಣ ದಾಖಲಿಸಲು ಮತ್ತು ಅವರು ಅಕ್ರಮವಾಗಿ ನಿರ್ಮಿಸಿದ ಆಸ್ತಿಗಳನ್ನು ಕೆಡವಲು ಶಿವಪುರಿ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಲಾಗಿದ್ದು, ಪೊಲೀಸರು ಆರೋಪಿಗಳಾದ ಅಜ್ಮತ್ ಖಾನ್, ವಕೀಲ್ ಖಾನ್, ಆರಿಫ್ ಖಾನ್, ಶಾಹಿದ್ ಖಾನ್, ಇಸ್ಲಾಂ ಖಾನ್, ರಹೀಶಾ ಬಾನೋ ಮತ್ತು ಸೈನಾ ಬಾನೊ ಎಂಬ ಕಿರಾತಕರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಜೈಲಿಗಟ್ಟಿದ್ದಾರೆ. ಜೊತೆಗೆ ಅರಣ್ಯ, ಪೊಲೀಸ್ ಮತ್ತು ಜಿಲ್ಲಾಡಳಿತದ ಜಂಟಿ ತಂಡವು ಅರಣ್ಯ ಭೂಮಿಯಲ್ಲಿ ಮನೆ ನಿರ್ಮಿಸಲಾಗಿದೆ ಎಂಬ ಕಾರಣಕ್ಕಾಗಿ ಆರೋಪಿಗಳ ಕುಟುಂಬದ ಮೂರು ಮನೆಗಳನ್ನು ಭಾಗಶಃ ನೆಲಸಮಗೊಳಿಸಿದೆ.
ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ ನಂತರ ದಲಿತ ಸಮುದಾಯದ ಜನರ ಮೇಲೆ ನಡೆಯುತ್ತಿರುವ ಇಂತಹ ಕ್ರೂರ ಕೃತ್ಯಗಳು ಕಡಿಮೆಯೂ ಆಗದೆ, ಅತ್ತ ಆರೋಪಿಗಳಿಗೆ ಸರಿಯಾದ ಶಿಕ್ಷೆಯೂ ಆಗದೆ ಜಾತಿ ವ್ಯವಸ್ಥೆ ದಿನೇ ದಿನೇ ಜೀವಂತವಾಗುತ್ತಲೇ ಇದೆ. ಜಾತಿಯ ಕಾರಣಕ್ಕೆ ನಡೆಯುವ ಕೊಲೆ, ದೌರ್ಜನ್ಯ, ಅತ್ಯಾಚಾರ, ಹೇಲು ತಿನ್ನಿಸುವ, ಮೂತ್ರ ಕುಡಿಸುವ ಕೃತ್ಯಗಳು ಕಡಿಮೆಯಾಗಬೇಕಾದಾರೆ ಕಾನೂನು ಬಲಗೊಳ್ಳಬೇಕಾಗಿದೆ. ಜಾಮೀನು ರಹಿತ ಸೂಕ್ತ ಕಾನೂನು ಕ್ರಮಗಳು ಕಟ್ಟುನಿಟ್ಟಾಗಿ ಜಾರಿಯಾಗಬೇಕಾಗಿದೆ.