ಬೆಳ್ತಂಗಡಿ: ಯಾರೂ ವಿರೋಧಿಸಿದರೂ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಯನ್ನು ಜನರಿಗೆ ಮುಟ್ಟಿಸುತ್ತೇವೆ ಎಂದು ಬೆಳ್ತಂಗಡಿ ಮಾಜಿ ಶಾಸಕ ಕೆ. ವಂಸತ ಬಂಗೇರ ಹೇಳಿದ್ದಾರೆ.
ಅವರು ಜೂ.20ರಂದು ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಉಚಿತ ಬಸ್ ಪ್ರಯಾಣದ ಮೂಲಕ ಮಹಿಳೆಯರು ದೇವಸ್ಥಾನ, ಮಸೀದಿ, ಚರ್ಚ್, ಬಸದಿಗಳಿಗೆ ಹೋಗಿ. ಆದರೆ ಬಸ್ ಬಾಗಿಲು ಮುರಿದು ಹಾಕಬೇಡಿ, ಮುಂದೆ ಪುರುಷರಿಗೂ ನಮ್ಮ ಕಾಂಗ್ರೆಸ್ ಸರ್ಕಾರ ಯೋಜನೆಗಳನ್ನು ತರುತ್ತದೆ ಎಂದು ಭರವಸೆ ನೀಡಿದರು.
ಬಿಜೆಪಿ ಸರ್ಕಾರ ಮಾಡಿದ ಏರಿಕೆಯ ವಿದ್ಯುತ್ ಬೆಲೆಯನ್ನು ನಾವು ಅನುಷ್ಠಾನಕ್ಕೆ ತಂದಿದ್ದೇವೆ. ಆದರೆ ಬೆಲೆ ಏರಿಕೆಯ ಬಗ್ಗೆ ಸರ್ಕಾರ ವಿಮರ್ಶೆ ಮಾಡಬಹುದು ಎಂದರು. ದುಡ್ಡು ಕೊಟ್ಟರೂ ಪ್ರಧಾನಿ ಮೋದಿ ಅಕ್ಕಿ ಕೋಡೋದಿಲ್ಲ ಅಂತಾರೆ. ಯಾರು ಬೇಕಾದರೂ ಅಡ್ಡ ಬರಲಿ, ಎಲ್ಲಾ ಅಡ್ಡವನ್ನೂ ಮುರಿದು 5 ಗ್ಯಾರಂಟಿಯನ್ನು ಸಾರ್ವಜನಿಕರಿಗೆ ಕೊಡಲು ಶತಸಿದ್ಧ ಎಂದರು . ಇನ್ನೂ ತಾಲೂಕಿನಲ್ಲಿ 5 ವರ್ಷಗಳಲ್ಲಿ ನಡೆದ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತೇವೆ. ಪ್ರತೀ ಅಧಿಕಾರಿಗಳನ್ನು ವಿಚಾರಿಸುತ್ತೇವೆ ಎಂದಿದ್ದಾರೆ.
ಕೇಂದ್ರದಿಂದ ಅಕ್ಕಿ ಸ್ಥಗಿತ, ತಟ್ಟೆ ಬಡಿದು ಆಕ್ರೋಶ..!
ಕಾಂಗ್ರೆಸ್‌ನ 5 ಗ್ಯಾರಂಟಿಗಳಲ್ಲಿ ಒಂದಾದ ಉಚಿತ 10 ಕೆಜಿ ಅಕ್ಕಿ ವಿತರಣೆಗೆ ಕೇಂದ್ರ ಸಾಥ್ ನೀಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬೆಳ್ತಂಗಡಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಟ್ಟೆ ಬಡಿದುಕೊಂಡು ತಹಶೀಲ್ದಾರ್ ಕಛೇರಿಗೆ ತಲುಪಿ ಮನವಿ ನೀಡಿದರು. ಈ ವೇಳೆ ತಹಶೀಲ್ದಾರ್ ಗೈರಾಗಿದ್ದಕ್ಕೆ ಮಾಜಿ ಶಾಸಕ ಕೆ. ವಸಂತ ಬಂಗೇರ ಕಿಡಿಕಾರಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮಾಜಿ ಜಿ.ಪಂ ಸದಸ್ಯರಾದ ಧರಣೇಂದ್ರ ಕುಮಾರ್, ನಮಿತಾ ಪೂಜಾರಿ, ಶೇಖರ ಕುಕ್ಕೇಡಿ, ಹಿರಿಯರಾದ ರಾಜು ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ, ರವೀಂದ್ರ ಪೂಜಾರಿ, ಸ್ವಾಮಿ ಪ್ರಸಾದ ಮಾಲಕ ನಾಗೇಶ್ ಕುಮಾರ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಂದನಾ ಭಂಡಾರಿ, ತಣ್ಣೀರುಪಂಥ ಗ್ರಾ.ಪಂ.ಉಪಾಧ್ಯಕ್ಷ ಐಯೂಬು, ಮನೋಹರ ಇಳಂತಿಲ ಹಾಗೂ ಎಲ್ಲಾ ಘಟಕದ ಅಧ್ಯಕ್ಷರು, ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.