ಸಾರ್ವಜನಿಕ ರಸ್ತೆಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ಗೇಟ್..!: ದ.ಕ ಜಿಲ್ಲಾಧಿಕಾರಿಗಳಿಗೆ, ಪುತ್ತೂರು ಸಹಾಯಕ ಆಯುಕ್ತರಿಗೆ ಸಾರ್ವಜನಿಕರ ದೂರು: ಮನವಿಗೆ ಸ್ಪಂಧಿಸಿದ ಅಧಿಕಾರಿಗಳಿಂದ ಗೇಟ್ ತೆರವು..!

ಬೆಳ್ತಂಗಡಿ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹಿಂಭಾಗದಲ್ಲಿ ವ್ಯವಸ್ಥಾಪನಾ ಸಮಿತಿಯವರು ಅಳವಡಿಸಿದ್ದ ಗೇಟನ್ನು ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ದ.ಕ ಜಿಲ್ಲಾಧಿಕಾರಿಗಳ ಸೂಚನೆಯಂತೆ ತಹಶೀಲ್ದಾರರ ಉಪಸ್ಥಿತಿಯಲ್ಲಿ ಜೂ.13ರಂದು ತೆರವುಗೊಳಿಸಲಾಯಿತು.

ಕಳೆದ ಒಂದು ವರ್ಷದ ಹಿಂದೆ ದೇವಸ್ಥಾನದ ಹಿಂಭಾಗದಲ್ಲಿ ಕೊಕ್ಕಡ ಗ್ರಾಮದ ಸ.ನಂ 167/1 ರಲ್ಲಿ ಅನ್ನಛತ್ರದ ಬಳಿ ರಸ್ತೆಗೆ ಗೇಟು ಅಳವಡಿಸಲಾಗಿತ್ತು. ಈ ರಸ್ತೆಯು ಸಾರ್ವಜನಿಕವಾಗಿ ಉಪಯೋಗಿಸಲ್ಪಡುತ್ತಿದ್ದು ಇಲ್ಲಿನ ನಿವಾಸಿಗಳು ಗೇಟ್ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದು ಯಾವುದನ್ನೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ಲೆಕ್ಕಿಸದೆ ಗೇಟ್ ಅಳವಡಿಸಿದ್ದರು.

ಈ ಬಗ್ಗೆ ಸ್ಥಳೀಯರು ದ.ಕ ಜಿಲ್ಲಾಧಿಕಾರಿಗಳು ಮತ್ತು ಪುತ್ತೂರು ಸಹಾಯಕ ಆಯುಕ್ತರಿಗೆ ದೂರು ನೀಡಿ ಮನವಿ ಮಾಡಿದ್ದರು. ಮನವಿಗೆ ಸ್ಪಂಧಿಸಿದ ದ.ಕ ಜಿಲ್ಲಾಧಿಕಾರಿಗಳು ಸರಕಾರಿ ಸ್ಥಳದ ಮೂಲಕ ಸುಮಾರು 50 ವರ್ಷಗಳಿಂದ ಇದ್ದ ರಸ್ತೆಗೆ ಹಾಕಿದ್ದ ಗೇಟನ್ನು ಪರಿಶೀಲಿಸಿ, ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ಅನುವು ಮಾಡಿಕೊಡುವಂತೆ ಸೂಚನೆ ನೀಡಿದ್ದರು.

ಜಿಲ್ಲಾಧಿಕಾರಿಗಳ ಸೂಚನೆಯಂತೆ ನಿನ್ನೆ ತಹಶೀಲ್ದಾರ್ ಸುರೇಶ್ ಕುಮಾರ್, ಕಂದಾಯ ನಿರೀಕ್ಷಕ ಪವಾಡಪ್ಪ ದೊಡ್ಡಮನಿ ಹಾಗೂ ಗ್ರಾಮ ಕರಣಿಕರು ಉಪಸ್ಥಿತಿಯಲ್ಲಿ ರಸ್ತೆಗೆ ಹಾಕಲಾಗಿದ್ದ ಗೇಟನ್ನು ತೆರವುಗೊಳಿಸಿ, ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

error: Content is protected !!