ಬೆಳ್ತಂಗಡಿ : ಕೆಪಿಸಿಸಿ ಉಪಾಧ್ಯಕ್ಷ ಗಂಗಾಧರ ಗೌಡರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಬೆಳ್ತಂಗಡಿ ನಿಷ್ಠಾವಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದೂರು ಪತ್ರವನ್ನು ನೀಡಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಗಂಗಾಧರ ಗೌಡರವರು ಪಕ್ಷದ ಹಾಗೂ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದ ಬಗ್ಗೆ ಸಿಟ್ಟುಗೊಂಡ ಬೆಳ್ತಂಗಡಿ ನಿಷ್ಠಾವಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ 18 ಪುಟಗಳ ಸಹಿ ಹಾಗೂ ಕೆಲ ದಾಖಲೆಗಳ ಜೊತೆ ದೂರು ಪತ್ರವನ್ನು ನೀಡಿದ್ದಾರೆ.
ದೂರಿನಲ್ಲಿ, ಕರ್ನಾಟಕ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಗಂಗಾಧರ ಗೌಡರವರು ಚುನಾವಣೆಗೆ ದಿನಾಂಕ ಘೋಷಣೆಯಾದ ದಿನದಿಂದ ಚುನಾವಣಾ ಫಲಿತಾಂಶ ದಿನಾಂಕದವರೆಗೆ ಪಕ್ಷದ ಪ್ರಮುಖ ಸ್ಥಾನದಲ್ಲಿ ಇದ್ದುಕೊಂಡು ಪಕ್ಷದ ಯಾವುದೇ ಸಭೆ ಸಮಾರಂಭದಲ್ಲಿ ಹಾಗೂ ಉಜಿರೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ಭಾಗವಹಿಸಿದ ಪ್ರಚಾರ ಸಭೆಯಲ್ಲಿಯೂ ಭಾಗವಹಿಸಿರುವುದಿಲ್ಲ. ಮತ್ತು ತಮ್ಮ ಆಪ್ತರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಡಿ ಎಂದು ಹೇಳಿದ ಬಗ್ಗೆ ದಾಖಲೆಗಳನ್ನು ಈ ಪತ್ರದೊಂದಿಗೆ ಕಳುಹಿಸಲಾಗುತ್ತದೆ. ಶೀಘ್ರವಾಗಿ ಪಕ್ಷಕ್ಕೆ ದ್ರೋಹ ಮಾಡಿದ ವ್ಯಕ್ತಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ತಮ್ಮಲ್ಲಿ ಈ ಮೂಲಕ ವಿನಂತಿ ಎಂದು ದೂರು ನೀಡಿದ್ದಾರೆ.