ಬೆಳ್ತಂಗಡಿ: ಪುತ್ತೂರು ಅಕ್ಷಯ ಕಾಲೇಜು ವತಿಯಿಂದ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ಕಾಮರ್ಸ್ ಆಂಡ್ ಡಿಸೈನ್ ಫೆಸ್ಟ್ ನಲ್ಲಿ ಬೆಳ್ತಂಗಡಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಚಾಂಪಿಯನ್ ಪ್ರಶಸ್ತಿ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಜೂ.09ರಂದು ಅಭಿನಂದನಾ ಕಾರ್ಯಕ್ರಮ ನಡೆದಿದೆ.
ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಶ್ರೀ ಗುರುದೇವ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಕೆ. ವಸಂತ ಬಂಗೇರ ಅವರು ‘ವಿದ್ಯಾರ್ಥಿ ಬದುಕು ಅವಕಾಶಗಳ ಪ್ರಪಂಚ. ವಿದ್ಯಾರ್ಥಿಗಳು ಶಾಲಾ – ಕಾಲೇಜಿನಲ್ಲಿ ಸಿಗುವ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುವ ಹುಮ್ಮಸ್ಸನ್ನು ರೂಢಿಸಿಕೊಂಡು ತನ್ನನ್ನು ತಾನು ಬೆಳೆಸಿಕೊಳ್ಳಬೇಕು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ಮುಕ್ತ ಅವಕಾಶವನ್ನು ನೀಡುತ್ತಾ ಬಂದಿದ್ದೇವೆ. ಅವರ ಭಾಗವಹಿಸುವ ಸಂಪೂರ್ಣ ಖರ್ಚುವೆಚ್ಚದ ಜತೆ ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಉಪನ್ಯಾಸಕರು ಪಠ್ಯದ ಜತೆಗೆ ವಿದ್ಯಾರ್ಥಿಗಳ ಪ್ರತಿಭೆಗೆ ಪೂರಕ ಮಾಹಿತಿಯನ್ನು ನೀಡುವ ಕೆಲಸವನ್ನು ಮಾಡಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ ಮಾತನಾಡಿ, ‘34 ಕಾಲೇಜುಗಳ ಸ್ಪರ್ಧೆಯ ಮಧ್ಯೆ ಶ್ರೀ ಗುರುದೇವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಅಮೋಘವಾದುದು. ಸಕಾರಾತ್ಮಕ ವಿಚಾರದಲ್ಲಿ ಅಂಜಿಕೆಯಿಲ್ಲದೆ ಭಾಗವಹಿಸುವ ಮನೋಸ್ಥಿತಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು’ ಎಂದರು.
ಗುರುದೇವ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಸಮೀವುಲ್ಲಾ ಬಿ.ಎ. ಮಾತನಾಡಿ ಶುಭ ಹಾರೈಸಿದರು.
ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕ ಸತೀಶ್, ಆಂಗ್ಲ ಭಾಷಾ ಉಪನ್ಯಾಸಕಿ ದೀಪ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಮಲ್ಟಿ ಟಾಸ್ಕ್ ವಿಭಾಗದಲ್ಲಿ ತೃತೀಯ ಬಿಕಾಂ ವಿದ್ಯಾರ್ಥಿ ಪ್ರೇಮ್ ಸಾಗರ್ ಪ್ರಥಮ ಸ್ಥಾನವನ್ನು, ಮೂವಿ ಸ್ಪೂಪ್ ಸ್ಪರ್ಧೆಯಲ್ಲಿ ದ್ವಿತೀಯ ಬಿಕಾಂ ವಿದ್ಯಾರ್ಥಿಗಳಾದ ಚೇತನ್, ವೀರೇಶ್, ಆದಿತ್ಯ, ದುರ್ಗಾಪ್ರಸಾದ್, ಹಸ್ತವಿ, ತೇಜಾಕ್ಷಿ, ವಿಶ್ಮಿತ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು ವಿದ್ಯಾರ್ಥಿಗಳ ಸಾಧನೆಗೆ ಪ್ರಶಸ್ತಿ ಫಲಕ ಮತ್ತು ನಗದು ಪುರಸ್ಕಾರ ಲಭಿಸಿದೆ.