ಭಯೋತ್ಪಾದಕ ಕೃತ್ಯಕ್ಕಾಗಿ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ ರವಾನೆ..! ಹವಾಲಾ ಹಣದ ಜಾಲ ಬೆನ್ನತ್ತಿರುವ ಎನ್‌ಐಎ ತಂಡ ಪುತ್ತೂರಿನಲ್ಲಿ ನಾಲ್ವರ ಬಂಧನ: ಪೆರಿಂಜೆಯ ಬದ್ರುದ್ದಿನ್ ಮೊಬೈಲ್, ಬ್ಯಾಂಕ್ ದಾಖಲೆ ವಶಕ್ಕೆ

 

 

 

ಮಂಗಳೂರು: ಭಯೋತ್ಪಾದಕ ಕೃತ್ಯಕ್ಕಾಗಿ ಗಲ್ಫ್ ರಾಷ್ಟ್ರಗಳಿಂದ ಹವಾಲಾ ಹಣ ರವಾನೆ ಆಗುತ್ತಿರುವ ಮಾಹಿತಿ ಆಧರಿಸಿ ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್ ಐ ಎ ಅಧಿಕಾರಿಗಳು ಮೇ.31ರಂದು ದಾಳಿ ನಡೆಸಿ ಪುತ್ತೂರಿನ ನಾಲ್ವರನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಸ್ಥಳೀಯ ಪೊಲೀಸರ ನೆರವು ಪಡೆದು ದಾಳಿ ನಡೆಸಿರುವ ಅಧಿಕಾರಿಗಳು, ಪುತ್ತೂರಿನ ಮಹಮ್ಮದ್ ಹ್ಯಾರೀಸ್ ಕುಂಬ್ರ (32), ಸಜ್ಜದ್ ಹುಸೈನ್, ಕೋಡಿಂಬಾಡಿ (37), ಫೈಜಲ್ ಅಹಮ್ಮದ್, ತಾರಿಗುಡ್ಡೆ, ಸಂಶುದ್ಧೀನ್ ಕೂರ್ನಡ್ಕ ಬಂಧಿಸಿದ್ದಾರೆ. ಆರೋಪಿಗಳಿಗೆ ಪಿಎಫ್ಐ ಲಿಂಕ್ ಸಾಧ್ಯತೆಯ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಹೊಸಂಗಡಿ ಗ್ರಾಮದ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಪೆರಿಂಜೆ ಎಂಬಲ್ಲಿ ಬದ್ರುದ್ದಿನ್ / ಬದ್ರು ಎಂಬಾತನ ಮನೆಗೆ ಬೆಳಗ್ಗೆ 5:30ರ ವೇಳೆಗೆ ದಾಳಿ ನಡೆಸಿರುವ ಎನ್.ಐ.ಎ ಬದ್ರುದ್ದಿನ್ ಅವರ ಮೊಬೈಲ್ ಫೋನ್, ಬ್ಯಾಂಕ್ ಗೆ ಸಂಬಧಿಸಿದ ದಾಖಲೆ ಹಾಗೂ ವ್ಯವಹಾರದ ದಾಖಲೆಯನ್ನು ವಶಕ್ಕೆ ಪಡೆದಿದ್ದಾರೆ. ಬದ್ರುದ್ದಿನ್ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವ ಬಗ್ಗೆ ತನಿಖೆಯಲ್ಲಿ ಪತ್ತೆಯಾಗಿದ್ದು ಯಾವ ಕಾರಣಕ್ಕಾಗಿ ಹಣ ವರ್ಗಾವಣೆಯಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿಗಾಗಿ ಬ್ಯಾಂಕ್ ದಾಖಲೆ ಹಾಗೂ ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಮಧ್ಯಾಹ್ನ 12:45 ದರವರೆಗೆ ಕಾರ್ಯಾಚರಣೆ ನಡೆಸಿದ್ದಾರೆ.

ಬಿಹಾರದ ಪಾಟ್ನಾದಲ್ಲಿ 2022ರ ಜುಲೈ ತಿಂಗಳಲ್ಲಿ ಪತ್ತೆಯಾಗಿದ್ದ ಫುಲ್ವಾರಿ ಶರೀಫ್ ಪ್ರಕರಣದ ಬಳಿಕ ಈ ಕುರಿತ ತನಿಖೆ ಚುರುಕುಗೊಂಡಿತ್ತು. ಬಿಹಾರದಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದು ತನಿಖೆಯಲ್ಲಿ ಕಂಡುಬAದಿತ್ತು.

ತನಿಖೆಯ ಜಾಡು ಹಿಡಿದು ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದ ಎನ್ ಐ ಎ ಅಧಿಕಾರಿಗಳು 2ತಿಂಗಳ ಹಿಂದೆ ಬಂಟ್ವಾಳ ಮತ್ತು ಪುತ್ತೂರಿನಲ್ಲಿ ದಾಳಿ ನಡೆಸಿದ್ದರು. ಬಂಟ್ವಾಳ ನಿವಾಸಿ ಮಹಮ್ಮದ್ ಸಿನಾನ್, ಸಜಿಪ ಮೂಡದ ಸರ್ಫ್ರಾಜ್ ನವಾಜ್, ಇಕ್ಬಾಲ್, ಪುತ್ತೂರಿನ ಅಬ್ದುಲ್ ರಫೀಕ್ ಮತ್ತು ಕೇರಳದ ಕಾಸರಗೋಡಿನ ಕುಂಜತ್ತೂರು ನಿವಾಸಿ ಅಬೀದ್ ಕೆ.ಎಂ. ಎಂಬವರನ್ನು ಬಂಧಿಸಲಾಗಿತ್ತು. ದಾಳಿ ಸಂದರ್ಭದಲ್ಲಿ ಡಿಜಿಟಲ್ ಸಾಕ್ಷ್ಯಗಳು ಮತ್ತು ಬೇನಾಮಿ ಖಾತೆಗಳಲ್ಲಿ ಕೋಟ್ಯಂತರ ರೂ. ವಹಿವಾಟು ನಡೆಸಿದ್ದು ಪತ್ತೆಯಾಗಿತ್ತು. ಇದೇ ನೆಟ್ವರ್ಕ್ ಆಧರಿಸಿ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ತಾಲೂಕಿನ 16 ಕಡೆಗಳಲ್ಲಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದ್ದು ಬಿಹಾರದ 4ಜನ ಎನ್.ಐ.ಎ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

error: Content is protected !!