ರಾಜ್ಯದ ಬಹುಬೇಡಿಕೆಯ ವಾಲಿಬಾಲ್ ಆಟಗಾರ್ತಿ ಸಾಲಿಯತ್ (24) ನಿಧನ..!: ಹೃದಯ ಬೇನೆಯಿಂದ ಕೊನೆಯುಸಿರೆಳೆದ ಪ್ರತಿಭಾನ್ವಿತೆ

ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ. ಕಾಲೇಜು ಹಳೇ ವಿದ್ಯಾರ್ಥಿ ಸಾಲಿಯತ್ (24) ಹೃದಯಾಘಾತದಿಂದ ಮೇ.31ರಂದು ಮೃತಪಟ್ಟಿದ್ದಾರೆ.

ಪಡಂಗಡಿ ಪೊಯ್ಯೆಗುಡ್ಡೆ ನಿವಾಸಿಯಾಗಿರುವ ಇವರು ವಿವಾಹವಾಗಿ ಒಂದು ವರ್ಷವಾಗುತ್ತಿದ್ದು, ಚಿಕ್ಕಮಗಳೂರು ಪತಿ ಮನೆಯಲ್ಲಿದ್ದವರು. ಹೃದಯ ಬೇನೆಯಿಂದ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಮೃತಪಟ್ಟಿದ್ದು, ವೈದ್ಯರು ಹೃದಯಾಘಾತ ಎಂದು ದೃಢಪಡಿಸಿದ್ದಾರೆ. ಅವರು ತಂದೆ, ತಾಯಿ, ಪತಿಯನ್ನು ಅಗಲಿದ್ದಾರೆ.

ರಾಷ್ಟ್ರಮಟ್ಟದ ಆಟಗಾರ್ತಿ ಸಾಲಿಯತ್ ಸಾಧನೆ

ಪಡಂಗಡಿಯಲ್ಲಿ ಪ್ರಾಥಮಿಕ, ಎಸ್.ಡಿ.ಎಂ. ಅನುದಾನಿತ ಪ್ರೌಢ ಶಾಲೆ ಉಜಿರೆಯಲ್ಲಿ 9ನೇ ತರಗತಿ, ಮುಂಡಾಜೆಯಲ್ಲಿ 10 ನೇ ತರಗತಿ ಶಿಕ್ಷಣ ಪೂರ್ಣಗೊಳಿಸಿ, ಉಜಿರೆ ಎಸ್.ಡಿ.ಎಂ.ನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪಡೆಯುತ್ತಿರುವಾಗ ಕ್ರೀಡಾ ಕ್ಷೇತ್ರದಲ್ಲಿ ಅತ್ಯಧಿಕ ಸಾಧನೆ ಮಾಡಿದ್ದಾರೆ.

ಹೈದರ್ ಪಡಂಗಡಿ ಅವರ ಗರಡಿಯಲ್ಲಿ ಆರಂಭದ ತರಬೇತಿಯನ್ನು ಪಡೆದ ಇವರು ಮುಂದೆ ಪ್ರೌಢ ಶಿಕ್ಷಣವನ್ನು ಮುಂಡಾಜೆ ಶಿಕ್ಷಣ ಸಂಸ್ಥೆಯಲ್ಲಿ ಪಡೆದು, ಇದೇ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಗುಣಪಾಲ್ ಎಂ.ಎಸ್. ಅವರ ಗರಡಿಯಲ್ಲಿ ಪಳಗಿ ವಾಲಿಬಾಲ್ ಆಟದಲ್ಲಿ ಅತ್ಯಂತ ಉತ್ಕೃಷ್ಟ ಪ್ರದರ್ಶನ ನೀಡಿ ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ನಡೆದ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡಕ್ಕೆ ದ್ವಿತೀಯ ಸ್ಥಾನವನ್ನು ತಂದುಕೊಟ್ಟಿದ್ದರು.

ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ಪಡೆದು ಇಲ್ಲಿಯೂ ಕರ್ನಾಟಕ ರಾಜ್ಯಕ್ಕೆ ಬಹುಬೇಡಿಕೆಯ ವಾಲಿಬಾಲ್ ಆಟಗಾರ್ತಿಯಾಗಿ ಜನಮನ್ನಣೆಗಳಿಸಿದ್ದರು. ಅವರ ಸಾಧನೆಯ ಹಿಂದೆ ತರಬೇತುದಾರರಾದ ಉಜಿರೆ ಎಸ್.ಡಿ.ಎಂ. ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್ ಅವರ ಶ್ರಮ ಅಪಾರವಿದೆ.

ರಾಷ್ಟ್ರಮಟ್ಟದ ವಾಲಿಬಾಲ್‌ನಲ್ಲಿ ಬೆಳ್ಳಿ ಪದಕ, ಸೀನಿಯರ್ ನ್ಯಾಷನಲ್ ದಕ್ಷಿಣ ವಲಯದಲ್ಲಿ ಚಿನ್ನದ ಪದಕ, ಜ್ಯೂನಿಯರ್ ನ್ಯಾಷನಲ್‌ನಲ್ಲಿ ತೃತೀಯ ಸ್ಥಾನಗಳಿಸಿದ್ದಾರೆ. ಇವರ ಸಾಧನೆಯನ್ನು ಮೆಚ್ಚಿ ಧರ್ಮಸ್ಥಳ ಧರ್ಮಾಧಿಕಾರಿ, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಶಂಸಿಸಿ ಗೌರವಿಸಿದ್ದರು.

error: Content is protected !!