ಮೈಸೂರು : ನಾಡಹಬ್ಬ ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತು ದಾಖಲೆ ನಿರ್ಮಿಸಿದ್ದ 67 ವರ್ಷದ ಆನೆ ಬಲರಾಮ ಭಾನುವಾರ ಸಂಜೆ ಅನಾರೋಗ್ಯದಿಂದ ಸಾವನ್ನಪ್ಪಿದೆ.
ಅತ್ಯಂತ ಸೌಮ್ಯ ಸ್ವಭಾವದ ಬಲರಾಮ ಆನೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹುಣಸೂರು ಅರಣ್ಯ ವ್ಯಾಪ್ತಿಯ ಹನಗೂಡು ಬಳಿಯ ಭೀಮನಕಟ್ಟೆ ಬಳಿಯ ಅರಣ್ಯ ಶಿಬಿರದಲ್ಲಿ ಕಳೆದ 45 ದಿನಗಳ ಹಿಂದೆ ಆಹಾರ ಸೇವಿಸುವಾಗ ತೊಗಟೆಯೊಂದನ್ನು ತಿಂದಿತ್ತು. ಇದರಿಂದ ಬಲರಾಮ ಆನೆಗೆ ಗಂಟಲು ಹಾಗೂ ಹೊಟ್ಟೆ ಭಾಗದಲ್ಲಿ ಗಾಯಗಳಾಗಿದ್ದವು. ಇದರಿಂದ ಅಸ್ವಸ್ಥಗೊಂಡಿದ್ದ ಬಲರಾಮ ಆನೆಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ತೊಗಟೆ ಇರುವುದನ್ನು ಎಂಡೋಸ್ಕೋಪ್ ಮಾಡಿ ಕಂಡುಹಿಡಿದಿದ್ದು, ಅದನ್ನು ಲದ್ದಿ ಮೂಲಕ ಹೊರ ಹೋಗುವಂತೆ ಮಾಡಿದ್ದರು.
ಆನಂತರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಬಲರಾಮ ಆನೆ, ಕಳೆದ ಒಂದು ವಾರದಿಂದ ಆಹಾರ ಮತ್ತು ನೀರನ್ನು ಬಿಟ್ಟಿದ್ದು, ನಿತ್ರಾಣವಾಗಿದ್ದು, ಭಾನುವಾರ ಸಂಜೆ ಸಾವನ್ನಪ್ಪಿದೆ ಎಂದು ವೈದ್ಯರು ದೃಢೀಕರಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ, ಅನಂತರ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಅರಣ್ಯ ಇಲಾಖೆ ಮೂಲಗಳು ಮಾಹಿತಿ ನೀಡಿದೆ.