ಬೆಳ್ತಂಗಡಿ : ಸರಕಾರಿ ಶಾಲೆಗೆ ಕನ್ನ ಹಾಕಿ ಕಳ್ಳತನ ಮಾಡುತ್ತಿದ್ದ 4 ಕಳ್ಳರನ್ನು ಊರವರು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳಾಲು ಗ್ರಾಮದ ಬೈಪಾಡಿಯಲ್ಲಿ ನಡೆದಿದೆ.
ಎ.30 ರಂದು ರಾತ್ರಿ ಸುಮಾರು 12 ಗಂಟೆಗೆ ವೇಳೆಗೆ ಬೈಪಾಡಿ ಸರಕಾರಿ ಫ್ರೌಡ ಶಾಲೆಯಲ್ಲಿ ಕಳ್ಳತನ ಮಾಡಲು ನಾಲ್ಕು ಜನ ಅಪರಿಚಿತ ಆರೋಪಿಗಳು ಕಾರಿನಲ್ಲಿ ಬಂದಿದ್ದು, ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಇದನ್ನು ಗಮನಿಸಿ ಕಳ್ಳರ ವಿಚಾರವನ್ನು ಊರವರಿಗೆ ತಿಳಿಸಿದರು. ತಕ್ಷಣ ಊರಿನವರು ಸೇರಿ ಕಳ್ಳರನ್ನು ಹಿಡಿದು ಹಿಗ್ಗಮುಗ್ಗ ಥಳಿಸಿ ಬಳಿಕ 112 ಸಹಾಯವಾಣಿಗೆ ಕರೆಮಾಡಿ ಮಾಹಿತಿ ನೀಡಿದ್ದು, ಧರ್ಮಸ್ಥಳ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಡಬ ತಾಲೂಕಿನ ಕುಟ್ರಪಾಡಿ ಗ್ರಾಮದ ದೋಲಮನೆ ನಿವಾಸಿ ಹೊನ್ನಪ್ಪ ಗೌಡರ ಮಗನಾದ ರಕ್ಷಿತ್ ಡಿ (24), ಕಡಬ ತಾಲೂಕಿನ ಕುಟ್ರಪಾಡಿ ಗ್ರಾಮದ ಮೀನನಾಡಿ ನಿವಾಸಿ ಧರ್ಣಪ್ಪ ಗೌಡರ ಮಗನಾದ ತೀರ್ಥೇಶ್. ಎಂ(29), ಕಡಬ ತಾಲೂಕಿನ ಕುಟ್ರಪಾಡಿ ಗ್ರಾಮದ ಮೀನಾಡಿ ನಿವಾಸಿ ಕುಶಾಲಪ್ಪ ಗೌಡರ ಮಗನಾದ ಯಜ್ಞಶ್ ಯು.ಹೆಚ್ (30) ಮತ್ತು ಕಡಬ ತಾಲೂಕಿನ ಕುಟ್ರಪಾಡಿ ಗ್ರಾಮದ ಹಳ್ಳಿಮನೆ ನಿವಾಸಿ ವಿಶ್ವನಾಥ ಶೆಟ್ಟಿ ಮಗನಾದ ರೋಹಿತ್ ಹೆಚ್. ಶೆಟ್ಟಿ(23) ಎಂದು ಗುರುತಿಸಲಾಗಿದೆ. ಬಂಧಿತ ನಾಲ್ಕು ಜನ ಆರೋಪಿಗಳು ಕಡಬ ತಾಲೂಕಿನಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರಾಗಿದ್ದಾರೆ ಎನ್ನಲಾಗಿದೆ.
ಆರೋಪಿಗಳ ವಿಚಾರಣೆಯ ವೇಳೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ 4 ಸರಕಾರಿ ಶಾಲೆಗಳಿಂದ, ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಸರಕಾರಿ ಶಾಲೆಗಳಿಂದ, ಪುತ್ತೂರು ನಗರ ಠಾಣಾ ವ್ಯಾಪ್ತಿಯ 1 ಸರಕಾರಿ ಶಾಲೆಯಿಂದ, ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯ 1 ಸರಕಾರಿ ಶಾಲೆ ಮತ್ತು ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕಡ ಸರಕಾರಿ ಶಾಲೆಯಿಂದ ಕಳ್ಳತನ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಒಟ್ಟು 3 ಲಕ್ಷ ರೂ ಅಂದಾಜು ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ ರವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐ (ಕಾ.ಸು) ಅನೀಲ್ ಕುಮಾರ್ ಡಿ, ಪಿ.ಎಸ್.ಐ (ತನಿಖೆ) ರೇಣುಕರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎ.ಎಸ್.ಐ ಸ್ಯಾಮುವೆಲ್, ರಾಜೇಶ್, ಪ್ರಶಾಂತ್, ಸತೀಶ್ ನಾಯ್ಕ ,ಲಾರೆನ್ಸ್ ,ಕೃಷ್ಣಪ್ಪ, ಶೇಖರ ಗೌಡ,ಮಂಜುನಾಥ, ಪ್ರಮೋದಿನಿ, ಅನಿಲ್ ಕುಮಾರ್, ಜಗದೀಶ, ಹರೀಶ್, ನಾಗರಾಜ್, ರಾಧಾ ಕೋಟಿನ್, ವಾಹನ ಚಾಲಕ ಲೋಕೇಶ್ ಹಾಗೂ 112 ಸಹಾಯವಾಣಿಯ ಸಿಬ್ಬಂದಿಗಳಾದ ಹರೀಶ್ ಮತ್ತು ಗಂಗಾಧರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.