ಬೆಳ್ತಂಗಡಿ : ‘ಕಳೆದ 23 ವರ್ಷಗಳಿಂದ ಪತ್ರಕರ್ತನಾಗಿ ತಾಲ್ಲೂಕಿನಾದ್ಯಂತ ಓಡಾಡಿ 81 ಗ್ರಾಮಗಳ ಮತ್ತು ಜನರ ಸಮಸ್ಯೆಯನ್ನು ಅರಿತುಕೊಂಡಿದ್ದೇನೆ. ರಾಷ್ಟ್ರೀಯ ಪಕ್ಷವೊಂದು ತಾಲ್ಲೂಕಿನ ಇತಿಹಾಸದಲ್ಲಿಯೇ ಮೊದಲು ಎಂಬಂತೆ ಅಲ್ಪಸಂಖ್ಯಾತ ಸಮುದಾಯದ ನನಗೆ ಬಿ ಫಾರ್ಮ್ ನೀಡಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದೆ. ಜಾತ್ಯಾತೀತ ಮನೋಭಾವದ ನನಗೆ ಮತ ನೀಡಿ ಆಶೀರ್ವದಿಸಿದಲ್ಲಿ ಜತೆಯಿದ್ದು ಜನ ಸಾಮಾನ್ಯರ ಬದುಕನ್ನು ಬೆಳಗುವ ಕಾರ್ಯ ಮಾಡುತ್ತೇನೆ’ ಎಂದು ಜೆಡಿಎಸ್ ಅಭ್ಯರ್ಥಿ ಅಶ್ರಫ್ ಅಲಿ ಕುಂಞಿಯವರು ಹೇಳಿದರು.
ಅವರು ಬೆಳ್ತಂಗಡಿ ಅಂಬೇಡ್ಕರ್ ಭವನದ ಬಳಿ ನಡೆದ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಜೆಡಿಎಸ್ ದೇಶಕ್ಕೆ ಪ್ರಧಾನಿ, ರಾಜ್ಯಕ್ಕೆ 3 ಬಾರಿ ಮುಖ್ಯಮಂತ್ರಿಗಳನ್ನು ನೀಡಿದ ಪಕ್ಷ. ಈ ಬಾರಿಯೂ ಮತ್ತೆ ಕುಮಾರಸ್ವಾಮಿ ಅವರೇ ಸಿಎಂ ಆಗಲಿದ್ದಾರೆಂಬುದು ಜೆಡಿಎಸ್ ಕೊಡುವ ಗ್ಯಾರೆಂಟಿ. ಮುಸ್ಲಿಂ ಸಮುದಾಯ ಸಂಘಟನೆಯಲ್ಲಿ ದುಡಿದ ನಾನು ಎಂದಿಗೂ ಅದರ ನಾಯಕರ ಹೆಸರನ್ನು ಸ್ವಾರ್ಥಕ್ಕೆ ಬಳಸಿಕೊಂಡಿಲ್ಲ. ಬಳಸಿಕೊಳ್ಳುವುದೂ ಇಲ್ಲ. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಪತ್ರಿಕಾಗೋಷ್ಠಿಯಲ್ಲಿ ಆ ಕೆಲಸ ಮಾಡಿದ್ದು ಆ ಯೋಗ್ಯತೆ ಅವರಿಗಿಲ್ಲ ಎಂದರು.
ನನ್ನನ್ನು ಹಲವು ರೀತಿಯಲ್ಲಿ ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಅವರ ಅಪಪ್ರಚಾರವೇ ನನ್ನನ್ನು ಹೆಚ್ಚು ಜನ ಸಾಮಾನ್ಯರಿಗೆ ಪರಿಚಯಿಸುವಂತೆ ಮಾಡಿದೆ. ಅಪಪ್ರಚಾರದ ಮಾತನ್ನು ಕಲ್ಲು ಎಂದು ಭಾವಿಸಿ ಮೆಟ್ಟಿಲಾಗಿ ನಿರ್ಮಿಸಿ ಅರಮನೆ ಕಟ್ಟುವ ಕಾರ್ಯವನ್ನು ಮಾಡಿಯೇ ಮಾಡುತ್ತೇನೆ. ಭ್ರಷ್ಟ ವ್ಯಕ್ತಿಗಳ ಜತೆ ಎಂದಿಗೂ ಕೈ ಜೋಡಿಸದೆ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದರ ಜತೆ ತಾಲ್ಲೂಕಿನಲ್ಲಿ ಪಕ್ಷ ಕಟ್ಟಿದವರ ಆದರ್ಶ, ಎಲ್ಲ ನಾಯಕರ ಸಹಕಾರದೊಂದಿಗೆ ಬೆಳ್ತಂಗಡಿಯಲ್ಲಿ ಪಕ್ಷ ಬಲಪಡಿಸುವ ಕಾರ್ಯ ಮಾಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಅವರು ‘ಜೆಡಿಎಸ್ ಭ್ರಷ್ಟಚಾರಕ್ಕೆ ಅವಕಾಶವನ್ನು ಎಂದಿಗೂ ನೀಡುವುದಿಲ್ಲ. ಕೆ ವಸಂತ ಬಂಗೇರ ಜೆಡಿಎಸ್ ಪಕ್ಷದ ಪ್ರಮುಖ ನಾಯಕರಾಗಿ ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಪಕ್ಷವನ್ನು ಮುನ್ನಡೆಸಿದವರು. ಭ್ರಷ್ಟಾಚಾರ ರಹಿತ ರಾಜಕಾರಣಿಯಾದ ಅವರ ಗರಡಿಯಲ್ಲೇ ಇದ್ದ ನಾವು ಅವರ ಆದರ್ಶವನ್ನು ಪಾಲಿಸಿಕೊಂಡು ಹೋಗುತ್ತಿದ್ದೇವೆ’. ಜೆಡಿಎಸ್ ಪಕ್ಷದಿಂದ ಮಾತ್ರ ಜನ ಸಾಮಾನ್ಯರ ಸಂತೃಪ್ತಿಯ ಬದುಕು ನಿರ್ಮಾಣ ಸಾಧ್ಯ. ಆರೋಗ್ಯ, ಉದ್ಯೋಗ ಮತ್ತು ಶಿಕ್ಷಣಕ್ಕೆ ಒತ್ತು ನೀಡಿ ಕರ್ನಾಟಕದ ಸಮಗ್ರ ಅಭಿವೃದ್ಧಿಯೇ ಪಕ್ಷದ ಉದ್ದೇಶವಾಗಿದೆ. ಚುನಾವಣಾ ಫಲಿತಾಂಶ ಘೋಷಣೆಯಾದ ಬಳಿಕ ಮೇ.18 ರಂದು ಹೆಚ್.ಡಿ.ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿಯಾಗುವುದು ಖಚಿತ. ಆ ನಿಟ್ಟಿನಲ್ಲಿ ನಮ್ಮ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ಅವರನ್ನು ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅಬೂಬಕ್ಕರ್ ಅಮ್ಮುಂಜೆ ಮಾತನಾಡಿ, ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದಾಗ ರೈತರಿಗೆ ಗೋಲಿಬಾರ್ ಮಾಡಿದ್ದು ಮರೆತಿಲ್ಲ, ಅರುಣಾಚಲಪ್ರದೇಶ, ಗೋವಾ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ನವರು ಬಿಜೆಪಿಗೆ ಮಾರಾಟವಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಆದ್ದರಿಂದ ಬಿ ಟೀಮ್ ಯಾರೆಂದು ಗೊತ್ತಾಗುತ್ತದೆ ಎಂದರು.
ಸಭೆಯಲ್ಲಿ ಸುಮಾರು 25 ಮಂದಿ ವಿವಿಧ ಪಕ್ಷಗಳಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಜೆಡಿಎಸ್ ಮೀನುಗಾರರ ಘಟಕದ ರಾಜ್ಯಾಧ್ಯಕ್ಷ ರತ್ನಾಕರ ಸುವರ್ಣ, ರಾಜ್ಯ ಕಾರ್ಯದರ್ಶಿ ಉಮೇಶ್ ಕುಮಾರ್, ಷಾ ಝಮೀರ್ ಬಂಟ್ವಾಳ ಕ್ಷೇತ್ರದ ಅಭ್ಯರ್ಥಿ ಪ್ರಕಾಶ್ ರಫಾಯಲ್ ಗೋಮ್ಸ್, ತಾಲ್ಲೂಕು ಕಾರ್ಯಾಧ್ಯಕ್ಷ ರಾಮ ಆಚಾರಿ, ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಎಚ್.ಎನ್. ನಾಗರಾಜ್, ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಬಂಡಶಾಲೆ, ಕಾರ್ಯದರ್ಶಿ ಶಾಹಿದ್ ಪಾದೆ, ರಾಮಕೃಷ್ಣ ಗೌಡ ನೆರಿಯ, ಜಲೀಲ್ ಜಾರಿಗೆಬೈಲು, ಪ್ರಕಾಶ್ ಹೆಬ್ಬಾರ್ ಅರಸಿನಮಕ್ಕಿ, ಲುಕ್ಮಾನುಲ್ ಹಕೀಂ ಧರ್ಮಸ್ಥಳ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.