ಓಟಿಪಿ ಕಿರಿಕಿರಿ: ಲಕ್ಷ-ಲಕ್ಷ ಹಣ ಕಳೆದುಕೊಳ್ಳುತ್ತಿರುವ ಜನ: ಬ್ಯಾಂಕ್ ಮುಂದೆ ಕಣ್ಣೀರಿಡುತ್ತಿರುವ ಗ್ರಾಹಕರು..!

ಡಿಜಿಟಲ್ ಇಂಡಿಯಾದಲ್ಲಿ ಎಲ್ಲವೂ ಆನ್ ಲೈನ್ ಪ್ರಕ್ರಿಯೆ. ಭದ್ರತೆಯ ದೃಷ್ಠಿಯಿಂದ, ಭ್ರಷ್ಟಾಚಾರಿಗಳಿಂದ ಮುಕ್ತಿ ಪಡೆಯುವ ಉದ್ದೇಶದಿಂದ, ಮೋಸ, ವಂಚನೆ ಮಾಡುವವರಿಂದ ತಪ್ಪಿಸಿಕೊಳ್ಳಲು ಈಗ ಪ್ರತಿಯೊಂದು ಕೆಲಸ ಕಾರ್ಯಗಳು ಆನ್ ಲೈನ್ ಮೂಲಕವೇ ನಡೆಯುತ್ತದೆ. ವಿಪರ್ಯಾಸ ಅಂದರೆ ಭದ್ರತೆಗಾಗಿ ಸರ್ಕಾರ ಎಷ್ಟೇ ಯೋಜನೆಗಳನ್ನು ಜಾರಿ ತಂದರೂ ಅಲ್ಲಿ ಕಳ್ಳರ ಕೈಚಳಕ ಮಾತ್ರ ನಿಲ್ಲೋದೆ ಇಲ್ಲ. ನೀವು ಚಾಪೆ ಕೆಳಗೆ ನುಗ್ಗಿದರೆ ನಾವು ರಂಗೋಲಿ ಕೆಳಗೆ ನುಗ್ಗಿಬಿಡುತ್ತೇವೆ ಅನ್ನೋವಂತೆ ಕಳ್ಳರು ಕರಾಮತ್ತು ತೋರಿಸುತ್ತಲೇ ಇದ್ದಾರೆ. ರೇಷನ್ ಅಂಗಡಿಯಲ್ಲಿ ಓಟಿಪಿ ಬರದೆ ಅಕ್ಕಿ ಸಿಗಲ್ಲ, ಬ್ಯಾಂಕ್ ನಲ್ಲಿ ಓಟಿಪಿ ಬರದೇ ಲೋನ್ ಸಿಗಲ್ಲ. ಈಗ ಎಲ್ಲೇ ಹೋದರೂ ಓಟಿಪಿ ಬರದೇ ಯಾವ ಕೆಲಸನೂ ಆಗಲ್ಲ. ಭದ್ರತೆಯ ದೃಷ್ಠಿಯಿಂದ ಆರಂಭವಾದ ಒಟಿಪಿಗೆ ಈಗ ಅಭದ್ರತೆಯ ಭಯ ಹೆಚ್ಚಾಗಿದೆ. ಹೌದು ಇತ್ತೀಚೆಗೆ ಓಟಿಪಿಯ ಕಾರಣಕ್ಕೆ ಬ್ಯಾಂಕ್ ನಲ್ಲಿ ಭದ್ರವಾಗಿ ಇಟ್ಟಿದ್ದ ಹಣವನ್ನು ವಂಚಕರು ದೋಚುತ್ತಿದ್ದಾರೆ. ಓಟಿಪಿ ಯಾರಿಗೂ ನೀಡಬೇಡಿ ಎಂದು ಹೇಳಿದರೂ, ಅವುಗಳ ಬಗ್ಗೆ ಜಾಹಿರಾತು ನೀಡಿದರು, ಕೆಲವೊಮ್ಮೆ ಜನ ಮರೆತು ಓಟಿಪಿ ಕೊಟ್ಟು ಲಕ್ಷ ಹಣವನ್ನೂ ಕಳೆದುಕೊಂಡಿದ್ದಾರೆ.

ವ್ಯಕ್ತಿಯೊಬ್ಬರು ಕೆಲಸದ ಒತ್ತಡದಲ್ಲಿದ್ದಾಗ, ಒಂದು ಕರೆಬರುತ್ತೆ. ಕರೆ ಮಾಡಿದ ವ್ಯಕ್ತಿ ಕನ್ನಡದಲ್ಲಿಯೇ ಮಾತನಾಡಿ ‘ಸರ್ ನಿಮ್ಮ ಎಟಿಎಂ ಬ್ಲಾಕ್ ಆಗಿದೆ. ನಿಮ್ಮ ಏಟಿಎಂ ಈಗಲೇ ಸರಿ ಮಾಡ್ಬೇಕಾದ್ರೆ ನಿಮಗೊಂದು ಓಟಿಪಿ ಬರುತ್ತೆ ಅದನ್ನು ಹೇಳಿ ಅಂತ ಹೇಳಿದ್ದರು. ಎಟಿಎಂ ಇಲ್ಲ ಅಂದರೆ ಕಷ್ಟ ಆಗಿಬಿಡುತ್ತೆ ಅಂತ ಈ ವ್ಯಕ್ತಿ ತನ್ನ ಮೊಬೈಲ್ ಗೆ ಬಂದ ಓಟಿಪಿಯನ್ನು ಹೇಳಿ ಬಿಡುತ್ತಾರೆ. ಆಗ ಕರೆ ಮಾಡಿದಾತ ಸರ್ ನಿಮ್ಮ ಖಾತೆಯಲ್ಲಿ 250 ರೂ ಇದೆ,  ಯಾಕೋ ಎಟಿಎಂ ಅನ್ ಬ್ಲಾಕ್ ಆಗುತ್ತಿಲ್ಲ. ನಿಮ್ಮ ಮನೆಯವರ ಏಟಿಎಂ ಇದ್ರೆ ಅದರ ನಂಬರ್ ಹೇಳಿ ಅಂತಾರೆ. ಆಗ ಈ ವ್ಯಕ್ತಿಗೆ ಇದು ವಂಚನೆಯ ಕರೆ ಅಂತ ಗೊತ್ತಾಯಿತು. ಅಷ್ಟೊತ್ತಿಗಾಗಲೇ ಖಾತೆಯಲ್ಲಿದ್ದ 250ರೂ ಯನ್ನು ಕರೆಮಾಡಿದಾತ ತನ್ನ ಖಾತೆಗೆ ವರ್ಗಾಯಿಸಿದ್ದ.

ಈ ಬಗ್ಗೆ ಸಂಬಂಧಪಟ್ಟ ಬ್ಯಾಂಕಿಗೆ ದೂರು ಕೊಡಲು ಹೋದಾಗ ಅಲ್ಲಿ ಮತ್ತೊಂದು ಆಶ್ವರ್ಯದ ಘಟನೆ ನಡೆದಿತ್ತು. ಬ್ಯಾಂಕ್ ಸಿಬ್ಬಂದಿ ಜೊತೆ 250 ರೂ ಕಳವಾದ ಬಗ್ಗೆ ಮಾಹಿತಿ ನೀಡಿದಾಗ, ಬ್ಯಾಂಕ್ ಸಿಬ್ಬಂದಿ ‘ಸರ್ ನಿಮ್ಮದು 250ರೂ, ಇಲ್ಲೊಬ್ಬರು ವ್ಯಕ್ತಿ ದಿನಾ ಬ್ಯಾಂಕಿಗೆ ಬಂದು ಕಣ್ಣೀರಿಡುತ್ತಿದ್ದಾರೆ. ಅವರು ನಿಮ್ಮ ಹಾಗೆ ಓಟಿಪಿ ಕೊಟ್ಟು 1 ಲಕ್ಷ ರೂ ಕಳೆದುಕೊಂಡಿದ್ದಾರೆ. ಇನ್ನೊಬ್ಬರು 50 ಸಾವಿರ ರೂ ಕಳೆದುಕೊಂಡಿದ್ದಾರೆ. ನಮ್ಮ ತಪ್ಪಿಲ್ಲದೆ ನೀವು ಕಳೆದುಕೊಂಡ ಹಣವನ್ನು ನಾವು ನಿಮಗೆ ಎಲ್ಲಿಂದ ನೀಡುವುದು..? ಇದಕ್ಕೆ ಪೊಲೀಸ್ ಕಂಪ್ಲೆಟ್ ಕೊಟ್ಟರೂ ಅವರಿಂದಲೂ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಇಂತಹ ವಂಚಕರ ದೊಡ್ಡ ತಂಡವೇ ಇದೆ. ಇನ್ನಾದರೂ ಜಾಗರೂಕರಾಗಿರಿ ಅಂದರು.

ಇಂತಹ ಘಟನೆಗಳು ಪ್ರತೀಯೊಂದು ಬ್ಯಾಂಕಿನಲ್ಲಿಯೂ ನಡೆಯುತ್ತಿದೆ. ಮೋಸದ ಕರೆಗಳಿಂದ ಹಲವಾರು ಮಂದಿ ವಂಚನೆಗೆ ಒಳಗಾಗಿದ್ದಾರೆ. ಕೆಲವೊಮ್ಮ ಈ ವಂಚಕರು ‘ನಿಮಗೆ 1 ಲಕ್ಷ , 10 ಸಾವಿರ, 50 ಸಾವಿರ ಹಣವನ್ನು ಸಾಲದ ರೂಪದಲ್ಲಿ ನೀಡುತ್ತೇವೆ. ನೀವು ನಿಮ್ಮ ಖಾತೆಸಂಖ್ಯೆ, ಎಟಿಎಂ ನಂಬರ್ ಕೊಡಿ. ಕೊನೆಗೆ ಒಟಿಪಿ ಬರುತ್ತೆ ಆ ನಂಬರ್ ಹೇಳಿದ್ರೆ ತಕ್ಷಣ ಹಣ ನಿಮ್ಮ ಖಾತೆಗೆ ವರ್ಗಾವಣೆಯಾಗುತ್ತೆ ಅಂತ ಹೇಳಿ, ಓಟಿಪಿ ಹೇಳಿದ ತಕ್ಷಣ ನಮ್ಮ ಖಾತೆಯಲ್ಲಿದ್ದ ಹಣವನ್ನೇ ಅವರ ಖಾತೆಗೆ ವರ್ಗಾಯಿಸಿ ಬಿಡುತ್ತಾರೆ. ಹೀಗಾಗಿ ಪ್ರತೀಯೊಬ್ಬರು ಜಾಗರೂಕರಾಗಿರಬೇಕು. ಬ್ಯಾಂಕ್‌ನಿಂದ ಯಾವುದೇ ಕಾರಣಕ್ಕೆ ಕರೆ ಬಂದರೂ ನೇರವಾಗಿ ಬ್ಯಾಂಕಿಗೆ ಹೋಗಿ ವಿಚಾರಿಸಿ. ಬ್ಯಾಂಕಿಗೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು ಕರೆಯ ಮೂಲಕ ಯಾರಿಗೂ ನೀಡಬೇಡಿ. ಅಪರಿಚಿತರ ಕರೆಗಳಿಗೆ ಸ್ಪಂದಿಸಬೇಡಿ ಎಂಬುದು ಪ್ರಜಾಪ್ರಕಾಶ ನ್ಯೂಸ್ ವಾಹಿನಿಯ ಕಳಕಳಿ.

error: Content is protected !!