ಬೆಳ್ತಂಗಡಿ: ‘ಸ್ವಾತಂತ್ರ‍್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ರಾಜ್ಯ ಶೌರ್ಯ ಪ್ರಶಸ್ತಿ’ಗೆ ತುಳುನಾಡಿನ ಯೋಧ ಸುಬೇದಾರ್ ಏಕನಾಥ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಎಂ.ಬಿ. ಕಿರಣ್ ಬುಡ್ಲೆಗುತ್ತು ಅವರು ಏ.03ರಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸ್ವಾತಂತ್ರ‍್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ (ರಿ) ಮಂಗಳೂರು ವತಿಯಿಂದ ಈ ವರ್ಷದಿಂದ ಶೌರ್ಯ ಪ್ರಶಸ್ತಿಯನ್ನು ನೀಡಲು ಆರಂಭಿಸಿದ್ದೇವೆ’. ಏ.05ರಂದು ಲೊಯಲ್ಲಾ ಹಾಲ್ ನಲ್ಲಿ ನಡೆಯುವ ಸಮಾರಂಭದಲ್ಲಿ ಮೊದಲ ಕೆದಂಬಾಡಿ ರಾಮಯ್ಯ ಗೌಡ ರಾಜ್ಯ ಶೌರ್ಯ ಪ್ರಶಸ್ತಿಗಾಗಿ ಭಾರತೀಯ ಭೂ ಸೇನೆಯ ನಿವೃತ್ತ ಯೋಧ, ಏಕನಾಥ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
1837ರ ಎಪ್ರಿಲ್ 5ರಂದು ಬ್ರಿಟಿಷರನ್ನು ಮಂಗಳೂರಿನಿಂದ ಹೊಡೆದೋಡಿಸಿ ಬಾವುಟಗುಡ್ಡೆ ಯಲ್ಲಿ ಪ್ರಥಮ ವಿಜಯ ಪತಾಕೆಯನ್ನು ಹಾರಿಸಿದ ಸ್ಮರಣಾರ್ಥ ಮೂರು ವರ್ಷಗಳಿಂದ ಸಂಸ್ಮರಣ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜೊತೆಗೆ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯನ್ನು ಬಾವುಟಗುಡ್ಡದಲ್ಲಿ ಅನಾವರಣಗೊಳಿಸಲಾಗಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ| ನಿರ್ಮಲಾ ನಂದನಾಥ ಮಹಾಸ್ವಾಮೀಜಿ ಅನುಗ್ರಹ ಸಂದೇಶ ನೀಡಲಿದ್ದು, ಒಡಿಯೂರು ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ವಿಗಾರ್ ಜನರಲ್ ಅತಿ ವಂ| ಮ್ಯಾಕ್ಸಿಮ್ ನೊರೊನ್ಹಾ, ಎಸ್‌ವೈಎಸ್ ದ.ಕ. ಜಿಲ್ಲಾ ಅಧ್ಯಕ್ಷ ಹಾಗೂ ಮುಸ್ಲಿಂ ಧರ್ಮಗುರು ಮೌಲಾನ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಶುಭ ನುಡಿಗಳನ್ನಾಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಮಂಗಳೂರು ಶಾಖಾ ಮಠದ ಡಾ| ಧರ್ಮಪಾಲನಾಥ ಸ್ವಾಮೀಜಿ ಉಪಸ್ಥಿತಲಿರಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ಪಿ.ಎಚ್.ಆನಂದ್ ನೆರಿಯ, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಪುತ್ತಿಲ, ಪ್ರಧಾನ ಸಂಚಾಲಕ ಭಾಸ್ಕರ್ ದೇವಸ್ಯ, ಕೋಶಾ ಧಿಕಾರಿ ಶಿವರಾಮ ಗೌಡ ನಿನ್ನಿಕಲ್ ಉಪಸ್ಥಿತರಿದ್ದರು.