ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ಸ್ಪರ್ಧೆಗಾಗಿ ಪೈಪೋಟಿ ಇತ್ತು. ಆದರೆ ಅಭ್ಯರ್ಥಿ ಘೋಷಣೆಯಾದ ಬಳಿಕ ಎಲ್ಲರೂ ಕಾಂಗ್ರೆಸ್ ಗೆಲುವಿಗಾಗಿ ಒಂದಾಗಿದ್ದಾರೆ. ಬೆಳ್ತಂಗಡಿಯಲ್ಲಿ ಒಗ್ಗಟ್ಟಿದೆ ಎಂದು ತೋರಿಸಿಕೊಟ್ಟಿದ್ದಾರೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಲ್ಲಿ ರಕ್ಷಿತ್ ಶಿವರಾಂರನ್ನು 25 ಸಾವಿರಕ್ಕಿಂತ ಅಧಿಕ ಮತಗಳಿಂದ ಗೆಲ್ಲಿಸುವ ಜವಾಬ್ಧಾರಿಯನ್ನು ತಾಲ್ಲೂಕಿನ ನಾಯಕರು ಮತ್ತು ಕಾರ್ಯಕರ್ತರು ಸಾಮೂಹಿಕವಾಗಿ ವಹಿಸಿಕೊಳ್ಳಬೇಕು’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್ ಹೇಳಿದರು.
ಅವರು ಏ.03ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಚುನಾವಣಾ ಪೂರ್ವ ತಯಾರಿ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
‘ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಹಲವು ಸಮೀಕ್ಷೆಗಳ ಮೂಲಕ ಸಾಬೀತಾಗಿದೆ. ಸಮಾಜವನ್ನು ವಿಭಜಿಸಿ, ಧರ್ಮ, ಜಾತಿಗಳನ್ನು ಒಡೆಯುತ್ತಿರುವ ಬಿಜೆಪಿಯ ನಿಲುವಿಗೆ ವಿರುದ್ಧವಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿü ಹಮ್ಮಿಕೊಂಡ ಭಾರತ್ ಜೋಡೋ ಪಾದಯಾತ್ರೆ ನಿರೀಕ್ಷೆಗೂ ಮೀರಿ ಯಶಸ್ಸು ಕಂಡು ಜನ ಸಾಮರಸ್ಯದ ಬದುಕಿಗೆ ಬಯಸುವುದು ಸಾಬೀತಾಗಿದೆ. ಸಿದ್ದರಾಮಯ್ಯರ ಸರ್ಕಾರ ಚುನಾವಣಾ ಪ್ರಣಾಳಿಕೆಯ 165 ಭರವಸೆಗಳಲ್ಲಿ 158 ಭರವಸೆ ಈಡೇರಿಸಿತ್ತು. ಹಾಗಾಗಿ ಕಾಂಗ್ರೆಸ್ ಈಗಾಗಲೇ ನೀಡಿದ ನಾಲ್ಕು ಭರವಸೆಯ ಗ್ಯಾರಂಟಿಗಳು ಅಧಿಕಾರಕ್ಕೆ ಬಂದ ಕೂಡಲೇ ಅನುಷ್ಠಾನಕ್ಕೆ ಬರುವಂತಹುದು. ಹೀಗಾಗಿ ತಾಲೂಕಿನಲ್ಲಿ ಗಂಗಾಧರ ಗೌಡ ಮತ್ತು ವಸಂತ ಬಂಗೇರರ ಆಳವಾದ ಅನುಭವವನ್ನು ಅರಿತುಕೊಂಡು, ಕಾಂಗ್ರೆಸ್ ಪಕ್ಷದಲ್ಲಿರುವ ಪ್ರತಿ ಕಾರ್ಯಕರ್ತನಿಗೂ ಗೌರವ ನೀಡಿ ಮುನ್ನಡೆಯಬೇಕು ಎಂದು ರಕ್ಷಿತ್ ಶಿವರಾಂ ಅವರಿಗೆ ಕಿವಿಮಾತು ಹೇಳಿದರು.
ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದ ಎನ್.ಡಿ.ಎ ಸರ್ಕಾರ ಕೋಟ್ಯಾಂತರ ಮಂದಿಯ ಉದ್ಯೋಗ ಕಳೆದುಕೊಳ್ಳುವಂತೆ ಮಾಡಿ ಬದುಕನ್ನು ನರಕವಾಗಿಸಿದೆ. ಸುಳ್ಳು ಹೇಳುವುದು, ಜಾತಿ ಧರ್ಮವನ್ನು ವಿಭಜನೆ ಮಾಡುವುದು ಬಿಜೆಪಿಯ ಅಜೆಂಡಾವಾಗಿದೆ. ಅಧಿಕಾರಕ್ಕೆ ಬಂದರೆ ಕಪ್ಪು ಹಣವನ್ನು ತರಿಸಿ ಪ್ರತಿಯೊಬ್ಬರ ಖಾತೆಗೆ ರೂ.15 ಲಕ್ಷ ಜಮಾಮಾಡುವುದಾಗಿ ಹೇಳಿ ಅದನ್ನು ಮಾಡದೆ 9 ವರ್ಷಗಳಲ್ಲಿ ಜನರಿಂದ ಸುಲಿಗೆ ಮಾಡುವ ಕೆಲಸ ಮಾಡುತ್ತಿದೆ. ಸಂವಿಧಾನ ವಿರೋಧಿ, ಭ್ರಷ್ಟಾಚಾರ, ಬೆಲೆ ಏರಿಕೆ, ಕೋಮುಗಲಬೆ ಎಲ್ಲವೂ ಬಿಜೆಪಿ ಪಕ್ಷದ ಸಿದ್ದಾಂತಗಳಾಗಿವೆ ಎಂದರು.
ಮಾಜಿ ಶಾಸಕ ಕೆ ವಸಂತ ಬಂಗೇರ ಮಾತನಾಡಿ, ‘ಕಾಂಗ್ರೆಸ್ ಪಕ್ಷ ನಮಗೆ ತಂದೆ ತಾಯಿಯಂತೆ. ಪಕ್ಷ ವಿರೋಧಿ ಕೆಲಸವನ್ನು ಯಾರೂ ಮಾಡಕೂಡದು. ಕಾಂಗ್ರೆಸ್ ಪಕ್ಷದ ಭರವಸೆಯ ಗ್ಯಾರಂಟಿಯನ್ನು ಮನೆ ಮನೆಗೆ ತಲುಪಿಸಿ ಜನರಿಗೆ ತಿಳಿಸಿ ಹೇಳುವ ಕೆಲಸವನ್ನು ಮಾಡಬೇಕು. ಕಾಂಗ್ರೆಸ್ ಈ ದೇಶ ಮತ್ತು ರಾಜ್ಯದಲ್ಲಿ ಜನರಿಗೆ ಪ್ರಯೋಜವಾಗುವ ಮಹತ್ತರ ಕಾರ್ಯಗಳನ್ನು ಮಾಡಿದೆ. ಭೂ ಮಸೂದೆ ಕಾನೂನು ತಂದಿರುವುದು, 94ಸಿ, 94ಸಿಸಿ, ಆಶ್ರಯ ಯೋಜನೆ ಈ ರೀತಿ ಹತ್ತು ಹಲವಾರು ಯೋಜನೆಗಳನ್ನು ತಂದು ಈ ದೇಶದ ಜನರಿಗೆ ಬದುಕು ನೀಡಿದ್ದು ಕಾಂಗ್ರೆಸ್. 2013 ರಿಂದ 2018 ರವರೆಗೆ ನಾನು ಶಾಸಕನಾಗಿರುವ ಸಂದರ್ಭದಲ್ಲಿ ಸಾವಿರಾರು ಕುಟುಂಬಗಳಿಗೆ 94 ಸಿ ಹಕ್ಕುಪತ್ರ ನೀಡಿದ್ದರೂ ತಹಶೀಲ್ದಾರ್ ಜೊತೆ ಕೇಳುವಾಗ ಕೇವಲ 221 ಎಂದು ಲೆಕ್ಕ ಕೊಟ್ಟಿದ್ದಾರೆ. ಶಾಸಕ ಹರೀಶ್ ಪೂಂಜರ ಪ್ರಭಾವದಿಂದ ಇಲ್ಲಿನ ಅಧಿಕಾರಿಗೂ ತಪ್ಪು ಮಾಹಿತಿ ನೀಡುವ ಸಂದರ್ಭ ಉಂಟಾಗಿದೆ. ಪುಂಜಾಲಕಟ್ಟೆಯಿAದ ಚಾರ್ಮಾಡಿಯವರೆಗೆ ರಸ್ತೆ ಅಗಲೀಕರಣದ ಹಿಂದೆ 40% ಕಮಿಷನ್ ಮತ್ತು ಲಕ್ಷಾಂತರ ಬೆಲೆ ಬಾಳುವ ಮರಗಳನ್ನು ಕಡಿದು ಮಾರುವ ಉದ್ದೇಶವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಜನರನ್ನು ಮೋಸ ಮಾಡಿ ಲೂಟಿ ಮಾಡುವ ಕಲೆಯನ್ನು ಶಾಸಕ ಹರೀಶ್ ಪೂಂಜಾ ಮಾಡುತ್ತಿದ್ದಾರೆ. ನಾನು ಶಾಸಕನಾಗಿದ್ದ ಸಂದರ್ಭ ದೇವಸ್ಥಾನದ ಬ್ರಹ್ಮಕಲಶಕ್ಕೆ ಯಾವ ಪಕ್ಷದವರು ಅಧ್ಯಕ್ಷನಾದರೂ ದೇವರ ಕೆಲಸ ಎಂದು ನಾನು ಅದನ್ನು ವಿರೋಧಿಸುತ್ತಿರಲಿಲ್ಲ. ಆದರೆ ಶಾಸಕ ಹರೀಶ್ ಪೂಂಜಾರವರು ತಾಲ್ಲೂಕಿನ ಯಾವುದೇ ದೇವಸ್ಥಾನದ ಬ್ರಹ್ಮಕಲಶಕ್ಕೂ ತಾನೇ ಅಧ್ಯಕ್ಷನಾಗಬೇಕು ಎಂಬ ದಾಹದ ಜೊತೆಗೆ ಆಡಂಬರವನ್ನು ಬಿಂಬಿಸುವುದು ಸರಿಯಲ್ಲ. ಮುಂದೆ ಮನೆಯ ಭೂತದ ಅಗೇಲು ಕಾರ್ಯಕ್ಕೂ ಅವರ ಅನುಮತಿ ಕೇಳುವ ಸಂದರ್ಭ ಉಂಟಾಗಬುದು ಎಂದರು. ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಎಲ್ಲರಿಗೂ ನ್ಯಾಯ ಕೊಡುತ್ತಾರೆ ಎಂಬ ವಿಶ್ವಾಸವಿದೆ. ಅವರೂ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿದರೆ ಅವರ ವಿರುದ್ಧವಾಗಿಯೂ ಧ್ವನಿ ಎತ್ತುವ ಕೆಲಸವನ್ನು ಮಾಡುವೆ. ಅವರು ಈ ಬಾರಿ ಶಾಸಕರಾಗಿ ಆಯ್ಕೆಯಾಗಬೇಕು. ಅದಕ್ಕಾಗಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಅವರು ನಾಮಪತ್ರ ಹಾಕುವ ಸಂದರ್ಭ ಒಂದು ಲಕ್ಷಕೂ ಅಧಿಕ ಕಾರ್ಯಕರ್ತರು ಭಾಗವಹಿಸಬೇಕು ಎಂದು ಕರೆ ನೀಡಿದರು.
ರಕ್ಷಿತ್ ಶಿವರಾಂ ಮಾತನಾಡಿ ಕಾಂಗ್ರೆಸ್ ತ್ಯಾಗ ಬಲಿದಾನದ ಪಕ್ಷ. ಓರ್ವ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಅವಕಾಶ ನೀಡಿದೆ. ಬಿಜೆಪಿಯ ಯಾವುದೇ ದಬ್ಬಾಳಿಕೆಗೆ ಜನ ಹೆದರಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಮರಳು ಲೂಟಿಯನ್ನು, 40% ಕಮಿಷನ್ ಲೂಟಿಯನ್ನು ತಡೆದು ತಾಲ್ಲೂಕಿನ ಅಭಿವೃದ್ಧಿ ಜೊತೆ ಎಲ್ಲಾ ಜಾತಿ ಧರ್ಮದವರ ಸಾಮರಸ್ಯದ ಬದುಕಿಗೆ ಸಂಕಲ್ಪ ಮಾಡಬೇಕು. ನಾನು ಹೊರಗಿನವನಲ್ಲ. ನನ್ನ ಜನನ ಪತ್ರದಲ್ಲಿ ಬೆಳ್ತಂಗಡಿಯೆಂದೇ ಇದೆ. ಗೆದ್ದರೂ ಸೋತರೂ ನನ್ನ ಕರ್ಮಭೂಮಿ ಬೆಳ್ತಂಗಡಿಯೇ ಆಗಿದೆ ಎಂದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಶೈಲೇಶ್ ಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಶಾಹಿದ್ ತೆಕ್ಕಿಲ್, ಜೆಸಿಂತ ಮೋನೀಸ್, ಲೋಕೇಶ್ವರಿ ವಿನಯಚಂದ್ರ,ರಾಮಚಂದ್ರ ಗೌಡ, ಅಬ್ದುಲ್ ರಹಿಮಾನ್ ಪಡ್ಪು, ಧರಣೇಂದ್ರ ಕುಮಾರ್, ಲಾವಣ್ಯ ಬಲ್ಲಾಳ್, ನಮಿತಾ ಪೂಜಾರಿ, ಶಾಹುಲ್ ಹಮೀದ್, ಮೋಹನ ಗೌಡ, ಸಲೀಂ, ರಾಯ್, ಮಹಮ್ಮದ್ ರಫಿ, ಬಿ.ಕೆ.ವಸಂತ್, ವಂದನಾ, ಉಷಾ, ಎಲ್. ಚಂದು, ಅಭಿನಂದನ್ ಹರೀಶ್ ಕುಮಾರ್, ವನಿತಾ, ಶೋಭಾ ಇನ್ನು ಅನೇಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮೇಲಂತಬೆಟ್ಟು, ಉಜಿರೆ, ಬೆಳ್ತಂಗಡಿ ನಗರದ ಹಲವು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದರು. ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಜಿ ಗೌಡ ಸ್ವಾಗತಿಸಿದರು. ಮನೋಹರ್ ಕುಮಾರ್ ಮತ್ತು ಸಂದೀಪ್ ನೀರಲ್ಕೆ ಕಾರ್ಯಕ್ರಮ ನಿರೂಪಿಸಿದರು.