5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಮುಂದೂಡಿದ ಸಾರ್ವಜನಿಕ ಶಿಕ್ಷಣ ಇಲಾಖೆ: ಮಾ.14 ರಂದು ವಿಭಾಗೀಯ ಪೀಠದಿಂದ ವಿಚಾರಣೆ: ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ದ್ವಿಸದಸ್ಯ ಪೀಠ ನಿರಾಕರಣೆ

ಬೆಂಗಳೂರು: 5 ಮತ್ತು 8 ನೇ ತರಗತಿಯ ವಿದ್ಯಾರ್ಥಿಗಳ ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸಿ ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶಿಸಿದ ಬೆನ್ನಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಬೋರ್ಡ್ ಪರೀಕ್ಷೆಯನ್ನು ಮುಂದೂಡಿದೆ.

ನ್ಯಾಯಾಲಯವು ಅನುಮತಿ ನೀಡಿದ್ರೆ ಬೋರ್ಡ್ ಪರೀಕ್ಷೆಗೆ ಮುಂದಿನ ದಿನಗಳಲ್ಲಿ ದಿನಾಂಕವನ್ನು ತಿಳಿಸಲಾಗುವುದು ಎಂದಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಬೋರ್ಡ್ ಪರೀಕ್ಷೆಯು ವಿದ್ಯಾರ್ಥಿಗಳ ಕಲಿಕಾ ಮಟ್ಟ, ಕಲಿಕಾ ನ್ಯೂನ್ಯತೆಗಳು ಹಾಗೂ ಯಾವ ವಿಷಯದಲ್ಲಿ ಹಿನ್ನಡೆಯುಂಟಾಗಿದೆ ಎಂಬುದನ್ನು ತಿಳಿಯುವುದಾಗಿದೆ. ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದು ಈ ಪಬ್ಲಿಕ್ ಪರೀಕ್ಷೆಯ ಉದ್ದೇಶವಾಗಿರಲಿಲ್ಲ ಎಂದಿದೆ.

ಈ ನಡುವೆ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದು, ಸರ್ಕಾರದ ಪರ ವಾದ ಮಂಡಿಸಿದ್ದ ವಕೀಲರು, ಈ ಪರೀಕ್ಷೆಯಿಂದ ವಿದ್ಯಾರ್ಥಿಗಳ ಮೇಲೆ ಯಾವುದೇ ದುಷ್ಪರಿಣಾಮ ಆಗಲ್ಲ. ಪರೀಕ್ಷೆಗೆ ಎಲ್ಲಾ ಸಿದ್ಧತೆ ನಡೆಸಲಾಗಿದೆ. ಹೀಗಾಗಿ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡುವಂತೆ ಕೋರಿದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜಿ. ನರೇಂದರ್ ಮತ್ತು ನ್ಯಾ.ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿ ವಿಚಾರಣೆಯನ್ನು ಮಾ.14ಕ್ಕೆ ಮುಂದೂಡಿದೆ. ಜೊತೆಗೆ ಈ ಪರೀಕ್ಷೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟಣೆ ಹೊರಡಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಕೋರಿದೆ.

error: Content is protected !!