ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಪನ್ನ: 9 ದಿನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಯಶಸ್ವಿ: ಸಂಭ್ರಮದಲ್ಲಿ ಮಿಂದೆದ್ದ ಭಕ್ತಸಾಗರ…

ವೇಣೂರು: ಇತಿಹಾಸ ಪ್ರಸಿದ್ದ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 9 ದಿನ ನಡೆದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಶೋತ್ಸವ ಫೆ.27ರಂದು ಸಂಪನ್ನಗೊಂಡಿದೆ.

ಫೆ.18ರಂದು ಗುರುವಾಯನಕೆರೆಯ ಶಕ್ತಿನಗರದಿಂದ ಅದ್ದೂರಿ ಮೆರವಣಿಗೆ ಮೂಲಕ ಕ್ಷೇತ್ರಕ್ಕೆ ಹಸಿರುಹೊರೆಕಾಣಿಕೆ ತಲುಪಿದ್ದು, ವಿವಿಧ ಗ್ರಾಮ, ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯದ ಬೇರೆ-ಬೇರೆ ಜಿಲ್ಲೆಗಳಿಂದ ಕ್ಷೇತ್ರಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣೆಯಾಗಿತ್ತು. ಸುಮಾರು 20 ಕಿ.ಮೀ ದೂರದವರೆಗೆ ವಿದ್ಯುತ್ ದೀಪಾಲಂಕಾರ, ಸುಮಾರು 80 ಕಿ.ಮೀವರೆಗೆ ಬ್ಯಾನರ್‌ಗಳ ಅಳವಡಿಕೆ, ಒಟ್ಟು ಕ್ಷೇತ್ರದ ಬ್ರಹ್ಮಕಲಶೋತ್ಸವವನ್ನು ಊರಿಗೇ ಊರೇ ಸಂಭ್ರಮಿಸಿದ್ದು, ಲಕ್ಷಾಂತರ ಭಕ್ತಾಧಿಗಳು ಶ್ರೀದೇವರ ದರ್ಶನ ಪಡೆದಿದ್ದಾರೆ.

ಪ್ರತಿನಿತ್ಯ ಮುಂಜಾನೆಯಿಂದಲೇ ವೈದಿಕ ಕಾರ್ಯಕ್ರಮ, ವಿಶೇಷ ಪೂಜೆ, ಭಜನೆ, ಧಾರ್ಮಿಕ ಉಪನ್ಯಾಸ, ವೈವಿಧ್ಯಮ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದ್ದು ಫೆ. 27ರಂದು ಬರೋಡಾ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಅಧ್ಯಕ್ಷತೆಯಲ್ಲಿ ಸಮಾರೋಪ-ಸಮಾರಂಭ ಕಾರ್ಯಕ್ರಮ ನಡೆದಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಶುಭಾಶಂಸನೆ ಮಾತುಗಳನ್ನಾಡುತ್ತಾ, 25 ವರ್ಷಕ್ಕಿಂತ ಮುಂಚೆ ಈ ಕ್ಷೇತ್ರದ ಜೀಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ನಡೆಯುತ್ತಿದ್ದರೆ ಕೇವಲ ಒಂದೇ ಪುಟದ ಆಮಂತ್ರಣ ಪತ್ರಿಕೆ ಸಿದ್ದವಾಗುತ್ತಿತ್ತು. ಅದರಲ್ಲಿ ಶ್ರೀಮಂತರ ಹೆಸರು ಮಾತ್ರ ಇರುತ್ತಿತ್ತು, ಆದರೆ ಈಗ 18 ಪುಟದ ಆಮಂತ್ರಣ ಪತ್ರಿಕೆಯಲ್ಲಿ ಶ್ರೀಸಾಮಾನ್ಯನ ಹೆಸರು ಇದೆ, ಕಾಲ ಬದಲಾದರೂ, ಜನರಲ್ಲಿ ಭಕ್ತಿ ಕಡಿಮೆ ಆಗಲಿಲ್ಲ. ಎಲ್ಲರ ಒಗ್ಗೂಡುವಿಕೆಯಿಂದ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು ಎಂದರು.

ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಯೋಗಿ ಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮಿಜೀಯವರು ಆಶೀರ್ವಚನ ನೀಡುತ್ತಾ, ಬ್ರಹ್ಮಕಲಶೋತ್ಸವ ಹೆಸರು, ಕೀರ್ತಿಗಾಗಿ ಮಾಡುವುದಲ್ಲ, ಶ್ರೀ ದೇವರು ಯೋಗ-ಭಾಗ್ಯ, ಗುರುಬಲ, ಶಕ್ತಿ ಕರುಣಿಸುವುದರಿಂದ ನಡೆಯುತ್ತದೆ. ಈ ಕ್ಷೇತ್ರಪುಣ್ಯದಾಮವಾಗಲಿ ಎಂದು ಹಾರೈಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬರೋಡಾ, ತುಳುಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಅಧ್ಯಕ್ಷತೆಯ ಮಾತುಗಳನ್ನಾಡುತ್ತಾ, ಧಾರ್ಮಿಕ ಚಿಂತನೆಯಲ್ಲಿ ರಾಜಕೀಯ ತರದೇ ದೇವರ ಕೆಲಸದಲ್ಲಿ ಭಕ್ತರಾಗಿ ಒಂದೇ ಭಾವನೆಯಲ್ಲಿ ಪಾಲುಪಡೆಯಬೇಕು. ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾದ ಎಲ್ಲರೂ ಭಾಗ್ಯವಂತರು ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಶಾಸಕ ಹರೀಶ್ ಪೂಂಜ ಸಮಾರೋಪ ಭಾಷಣದಲ್ಲಿ ಬ್ರಹ್ಮಕಲಶೋತ್ಸವದ ಆರಂಭದ ದಿನದಿಂದ ಕೊನೆಯ ದಿನದವರೆಗೆ ಬೇರೆ-ಬೇರೆ ಸಮಿತಿಯ ಮುಂದಾಳತ್ವ ವಹಿಸಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲಾ ಸ್ವಯಂ ಸೇವಕರಿಗೆ, ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲರು, ಶ್ರೀ ಕ್ಷೇತ್ರ ಕಟೀಲುವಿನ ಹರಿನಾರಾಯಣ ಅಸ್ರಣ್ಣ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್ ಕುಮಾರ್, ಮಾಜಿ ಸಚಿವ ಬಿ.ರಮಾನಾಥ ರೈ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್,ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಂದರ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಜ್ಞನಾರಾಯಣ ಭಟ್,ಮೂಡುಕೋಡಿ ತಿರುಗನಬೆಟ್ಟು ಗುಲಾಬಿ ದೇವಾಡಿಗ ಉಪಸ್ಥಿತರಿದ್ದರು.

ರಕ್ಷಾ ಪ್ರಾರ್ಥಿಸಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್ ಪುರುಷೋತ್ತಮ ರಾವ್ ಸ್ವಾಗತಿಸಿದರು. ಅಜಿತ್ ಕೊಕ್ರಾಡಿ ನಿರೂಪಿಸಿದರು.

error: Content is protected !!