ವೇಣೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ವೇಣೂರಿನಲ್ಲಿ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಳೆದ 8 ದಿನಗಳಿಂದ ವಿಜೃಂಭಣೆಯಿಂದ ನಡೆಯುತ್ತಿದ್ದು, ಇಂದು ಕೊನೆಯ ದಿನವಾಗಿದೆ. ಬೆಳಗ್ಗಿನಿಂದಲೇ ಪುಣ್ಯಾಹ ವಾಚನ, 108 ಕಾಯಿ ಗಣಪತಿ ಹೋಮ, ಮೀನ ಲಗ್ನ ಸುಮೂಹೂರ್ತದಲ್ಲಿ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ನ್ಯಾಸಗಳು, ಅವಸ್ರುತ ಬಲಿ, ಚಂದ್ರ ಮಂಡಲ, ಮಹಾಪೂಜೆ ಉತ್ಸವ, ಮಂಗಳ ಮಂತ್ರಾಕ್ಷತೆ ನಡೆಯುತ್ತಿದ್ದು, ಸಂಜೆ 4:30ರಿಂದ ದೊಡ್ಡರಂಗಪೂಜೆ, ಉತ್ಸವ, ಮಹಾರಥೋತ್ಸವ ಬಳಿಕ ಪ್ರಸಾದ ವಿತರಣೆ ನಡೆಯಲಿದೆ.
ಮಧ್ಯಾಹ್ನ 1:00ಗಂಟೆಯಿಮದ ಸುಚಿತ್ರಾ ಹೊಳ್ಳ ಮತ್ತು ತಂಡದಿಂದ ಸಂಗೀತ ಕಛೇರಿ, ಸಂಜೆ 5ರಿಂದ ರಾಮಕೃಷ್ಣ ಕಾಟುಕುಕ್ಕೆ ಮತ್ತು ತಂಡದಿಂದ ಭಕ್ತಿ ರಸಮಂಜರಿ, ಯಕ್ಷವೇದಿಕೆಯಲ್ಲಿ ಸಂಜೆ 7ರಿಂದ ಯಕ್ಷಗಾನ ಮಂಡಳಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೂಷಿತ ಯಕ್ಷಗಾನ ಮಂಡಳಿ ಪಾವಂಜೆ ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ, ರಾತ್ರಿ 9:30ರಿಂದ ಸಚಿವರನ್ನೇ ಮಾಯ ಮಾಡಿದ ಮಾಂತ್ರಿಕ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ಮಸ್ತ್ ಮ್ಯಾಜಿಕ್ ಅದ್ಭುತ ಹಾಸ್ಯಮಯ ವಿನೂತನ ಜಾದೂ ಮೂಡಿಬರಲಿದೆ.
ಸಂಜೆ 7ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಶುಭಾಂಶನೆ , ಶ್ರೀಧಾಮ ಮಾಣಿಲದ ಶ್ರೀ ಶ್ರೀ ಯೋಗಿ ಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಚಿತ್ರದುರ್ಗ ಮಠದ ಶ್ರೀ ಶ್ರೀ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಸಮಾರೋಪ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಕಟೀಲಿನ, ಹರಿನಾರಾಯಣ ಅಸ್ರಣ್ಣ, ಬೆಳ್ತಂಗಡಿ ವೃತ್ತನಿರೀಕ್ಷಕರಾದ ಶಿವಕುಮಾರ್, ಉದ್ಯಮಿಗಳಾದ ಸದಾಶಿವ ಶೆಟ್ಟಿ, ಗುಲಾಬಿ ದೇವಾಡಿಗ ಉಪಸ್ಥಿತಲಿರಲಿದ್ದಾರೆ.