ಗುಜರಾತ್: ಕಳೆದೊಂದು ದಶಕದಲ್ಲಿಯೇ ಅತ್ಯಂತ ಭೀಕರ ದುರಂತ ಎನ್ನಲಾಗಿರುವ ಗುಜರಾತ್‌ನ ಮೊರ್ಬಿಯಲ್ಲಿ ನಡೆದ ಕೇಬಲ್ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ತಲಾ 10ಲಕ್ಷ ರೂ ಪರಿಹಾರ ನೀಡುವಂತೆ ಗುಜರಾತ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
2022 ಅಕ್ಟೋಬರ್ 30 ರಂದು ಸಂಭವಿಸಿದ ಈ ದುರಂತದಲ್ಲಿ 130ಕ್ಕೂ ಅಧಿಕ ಮಂದಿ ಸಾವನಪ್ಪಿದ್ದು ಅನೇಕರು ಗಾಯಗೊಂಡಿದ್ದಾರೆ. ಹೀಗಾಗಿ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡುವಂತೆ ಗುಜರಾತ್ ಹೈಕೋರ್ಟ್ ಒರೆವಾ ಗ್ರೂಪ್ ಕಂಪನಿಗೆ ಆದೇಶಿದೆ. ಘಟನೆಯ ಬಗ್ಗೆ ತನಿಖೆ ನಡೆದಿದ್ದು ತೂಗುಸೇತುವೆಯ ಅರ್ಧದಷ್ಟು ತಂತಿಗೆ ತುಕ್ಕು ಹಿಡಿದಿತ್ತು, ನದಿಯ ಮೇಲ್ಭಾಗದ ಮುಖ್ಯ ಕೇಬಲ್ ತುಂಡಾಗಿರುವುದು ದುರಂತಕ್ಕೆ ಕಾರಣ ಎಂದು ಎಸ್‌ಐಟಿ ತಿಳಿಸಿದೆ. ಅಲ್ಲದೇ ಸೇತುವೆ ನವೀಕರಣದ ಸಂದರ್ಭದಲ್ಲಿ ಹಳೆಯ ಸ್ಟೀಲ್ ರಾಡ್‌ಗಳನ್ನು ಹೊಸ ಸಸ್ಪೆಂಡರ್‌ಗಳೊಂದಿಗೆ ಬೆಸುಗೆ ಹಾಕಲಾಗಿದೆ ಎಂಬುದನ್ನು ಎಸ್‌ಐಟಿ ಕಂಡು ಹಿಡಿದಿದೆ. ಆದ್ದರಿಂದ ಸಸ್ಪೆಂಡರ್‌ಗಳ ನಡವಳಿಕೆ ಬದಲಾಗಿದ್ದು, ದುರಂತ ಸಂಭವಿಸಲು ಕಾರಣವಾಗಿದೆ. ದುರಂತ ಸಂಭವಿಸುವ ಸಂದರ್ಭ ಸೇತುವೆ ಮೇಲೆ 300 ಜನರಿದ್ದರು. ಇದು ಸೇತುವೆ ಭಾರವನ್ನು ಹೊರುವ ಸಾಮರ್ಥ್ಯಕ್ಕಿಂತಲೂ ಹೆಚ್ಚಾಗಿದೆ ಎಂದು ತಿಳಿಸಿದೆ.