ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಪಂಚಾಯತ್ ರಾಜ್ ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರ್ ಕುಮಾರಿ ರೂಪಾ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಡಾರ್ಮಿಟರ್ ಹಾಲ್ ರಚನೆಯ ಟೆಂಡರ್ ಕಾಮಗಾರಿಯ ಬಿಲ್ ಮಂಜೂರಾತಿಗಾಗಿ 10 ಸಾವಿರ ರೂಪಾಯಿ ಲಂಚಕ್ಕೆ ಕುಮಾರಿ ರೂಪಾ ಬೇಡಿಕೆಯಿಟ್ಟಿದ್ದು, 8 ಸಾವಿರ ರೂಪಾಯಿಯನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಣವನ್ನು ವಶಕ್ಕೆ ಪಡೆದು ಕುಮಾರಿ ರೂಪಾರನ್ನು ಬಂಧಿಸಿದ್ದಾರೆ.
ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರುಗಳಾದ ಕಲಾವತಿ, ಚಲುವರಾಜು.ಬಿ, ಹಾಗೂ ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ ಎ ಇವರುಗಳು ಸಿಬ್ಬಂದಿ ಜೊತೆ ಪಾಲ್ಗೊಂಡಿದ್ದರು ಎಂದು ಲೋಕಾಯುಕ್ತ ಮಂಗಳೂರು ವಿಭಾಗದ ಎಸ್‌ಪಿಸಿಎ ಸೈಮನ್ ತಿಳಿಸಿದ್ದಾರೆ.