ಬೆಳ್ತಂಗಡಿ: ಸರಕಾರಿ ಶಾಲೆ ಅಭಿವೃದ್ಧಿಗೆ ಬರೋಡಾದ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿ ಪಣತೊಟ್ಟಿದ್ದು 4 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪಿಲಿಚಂಡಿಕಲ್ಲು ಹಿರಿಯ ಪ್ರಾಥಮಿಕ ಶಾಲೆಯ ಸ್ಮಾರ್ಟ್ ಕ್ಲಾಸ್ ಅನ್ನು ತಮ್ಮ ತಾಯಿ ಕಾಶೀ ಶೆಟ್ಟಿ ಅವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಳಿಸಿದ್ದಾರೆ.
ಹೌದು… ತಮ್ಮ ತಾಯಿ ಹೆಸರು ಕಾಶೀ ಶೆಟ್ಟಿಯವರ ಕಾಶೀ ಪ್ಯಾಲೇಸ್ ಕಟ್ಟಡದ ದಿ ಓಶಿಯನ್ ಪರ್ಲ್ ಮೂಲಕ ಮನೆಮಾತಾಗಿರುವ ಶಶಿಧರ್ ಶೆಟ್ಟಿ ಅವರು ಸರಕಾರಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಲಿಚಂಡಿಕಲ್ಲಿನಲ್ಲಿ ಫೆ. 13ರಂದು ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ನಡೆಯಿತು. ಉದ್ಯಮಿ, ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನ ಕೆರೆ ಇವರ ಮಾತೃಶ್ರೀಗಳಾದ ಕಾಶಿ ಶೆಟ್ಟಿ ಅಮ್ಮನವರು ಸ್ಮಾರ್ಟ್ ಕ್ಲಾಸ್‌ನ್ನು ಉದ್ಘಾಟಿಸಿದರು. ಬಳಿಕ ಸಭಾ ಕಾರ್ಯಕ್ರಮಕ್ಕೆ ದೀಪ ಬೆಳಗಿ ಚಾಲನೆಯನ್ನು ನೀಡಿದರು.
ವಿನೂತನ ಶೈಲಿಯ, ಆಕರ್ಷಕ ಸ್ಮಾರ್ಟ್ ಕ್ಲಾಸ್‌ಗೆ ಬೇಕಾದ ಉಪಕರಣ ಖರೀದಿಸಲು ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ನವಶಕ್ತಿ ಗುರುವಾಯನ ಕೆರೆ ಇವರು ಸುಮಾರು 4 ಲಕ್ಷ ರೂಪಾಯಿಗಳ ನ್ನು ಶಾಲೆಗೆ ನೀಡಿದ್ದಾರೆ. ಸ್ಮಾರ್ಟ್ ಕ್ಲಾಸ್ ಗೋಡೆ ತುಂಬೆಲ್ಲಾ ಸುಂದರ ಪರಿಸರ, ಪ್ರಾಣಿ, ಪಕ್ಷಿ, ಆಕಾಶ, ಕಾಮನಬಿಲ್ಲು ಜಲಚರಗಳ ಚಿತ್ರಗಳನ್ನು ರಾಜ್ಯ ಪ್ರಶಸ್ತಿ ವಿಜೇತ ಧನುಷ್ ಹೆಗ್ಡೆ ವೇಣೂರು ಕಣ್ಣಿಗೆ ಸೋಜಿಗವೆನಿಸುವಂತೆ ಬಿಡಿಸಿದ್ದು ಇವರನ್ನೂ ಶಶಿಧರ್ ಶೆಟ್ಟಿಯವರು ಸನ್ಮಾನಿಸಿ ಗೌರವಿಸಿದರು.
ಜೊತೆಗೆ ಕಾಶಿ ಅಮ್ಮನವರನ್ನು ಶಾಲೆಯ ಪರವಾಗಿ ವಿಶೇಷವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಶಿಧರ್ ಶೆಟ್ಟಿಯವರು ಇಂತಹ ಒಂದು ಕಾರ್ಯಕ್ರಮವನ್ನು ನಾನು ಇಲ್ಲಿ ವರೆಗೆ ನೋಡಿಲ್ಲ, ಈ ಶಾಲೆಯ ಹೆಸರು ಉನ್ನತಮಟ್ಟಕ್ಕೇರಲಿ ಎಂದರು.
ಇದೇ ವೇಳೆ ಸರಕಾರಿ ಶಾಲಾ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಾಗದೇ ಇದ್ದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಸದಸ್ಯ ಹೇಮಂತ್ ಶೆಟ್ಟಿ, ಮಮತಾ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಹಕೀಂ,ಉಪಾಧ್ಯಕ್ಷೆ ಲಲಿತ ಚಿದಾನಂದ್, ಸೇರಿದಂತೆ ಶಾಲಾ ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ನಾಗಪ್ಪಡಿ ಸ್ವಾಗತಿಸಿ ದೈಹಿಕ ಶಿಕ್ಷಕಿ ಅನಿತಾ ಕೆ. ಧನ್ಯವಾದವಿತ್ತರು .ಶಿಕ್ಷಕಿ ಕುಸುಮಾ ಕೆ ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ: