ಕರ್ನಾಟಕ ಬ್ಯಾಂಕ್ ಸಿಎಸ್ಆರ್‌ನ ಅಡಿ ದಿವ್ಯಾಂಗರಿಗಾಗಿ ಗಾಲಿಕುರ್ಚಿಗಳ ವಿತರಣೆ: ಬೆನ್ನುಹುರಿ ಅಪಘಾತಕ್ಕೊಳಗಾದ 5 ಮಂದಿಗೆ ಗಾಲಿಕುರ್ಚಿ ಹಸ್ತಾಂತರ

ಕನ್ಯಾಡಿ: ಸೇವಾಭಾರತಿಯ ಅಂಗಸಂಸ್ಥೆಯಾದ ಸೇವಾಧಾಮದಿಂದ ಗುರುತಿಸಲ್ಪಟ್ಟ 5 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಫೆ.05ರಂದು ಗಾಲಿಕುರ್ಚಿ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕರ್ನಾಟಕ ಬ್ಯಾಂಕಿನ ಮ್ಯಾನೆಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮಹಾಬಲೇಶ್ವರ ಎಂ.ಎಸ್ ಗಾಲಿಕುರ್ಚಿಗಳನ್ನು ಹಸ್ತಾಂತರಿಸಿ, ಸೇವಾಭಾರತಿಯು ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ಸಮುದಾಯ ಹಾಗೂ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಮಾಡುವ ನಿರಂತರ ಸೇವೆಯನ್ನು ಶ್ಲಾಘಸಿದರು. 100ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಕರ್ನಾಟಕ ಬ್ಯಾಂಕ್, ಸಮಾಜದ ಕೊರತೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ 1924 ರಿಂದಲೂ ಮಾನವೀಯತೆಯ ಸ್ಪರ್ಶದೊಂದಿಗೆ ಸಮಾಜ ಸೇವಾ ಕಾರ್ಯಗಳಿಗೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿರುತ್ತದೆ. ಸೇವಾಭಾರತಿಯ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಮುಂದಿನ ದಿನಗಳಲ್ಲಿ ಸಹಕರಿಸುವ ಭರವಸೆ ನೀಡಿ, ಫಲಾನುಭವಿಗಳಿಗೆ ವಿಶ್ವಾಸ ಬದುಕಿಗಾಗಿ ಧೈರ್ಯ ತುಂಬಿದರು.


ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಕೆ. ಎನ್ ಜನಾರ್ಧನ್ ಇವರು ಸೇವಾಭಾರತಿಯಿಂದ ನೀಡಿದ ನೀರಿನ ಹಾಸಿಗೆಗೆ ಧನ ಸಹಾಯದ ಚೆಕ್ಕನ್ನು ಫಲಾನುಭವಿಗೆ ಹಸ್ತಾಂತರಿಸಿ, ಸೇವಾಭಾರತಿ ಸಂಸ್ಥೆಯು ದಿವ್ಯಾಂಗರ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ ಹಾಗೂ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಇಂತಹ ಸಂಸ್ಥೆಯ ಪ್ರಯೋಜನ ಪಡೆದು ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸುವಲ್ಲಿ ಸಫಲರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ಶಾಖಾ ಪ್ರಬಂಧಕರುಗಳಾದ ವಿನಾಯಕ ಪ್ರಭು, ಪ್ರವೀಣ್, ಪದ್ಮಪ್ರಸಾದ್ ಆಳ್ವ, ಅವಿನಾಶ್ ಕೆ ಹಾಗೂ ಸೇವಾಧಾಮದ ಸಂಚಾಲಕರಾದ ಪುರಂದರ ರಾವ್, ಸಂಸ್ಥೆಯ ಅಧ್ಯಕ್ಷರಾದ ಕೆ ವಿನಾಯಕ ರಾವ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಚರಣ್ ಕುಮಾರ್ ಎಂ ಇವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೆ ಪುರಂದರ ರಾವ್ ಧನ್ಯವಾದವಿತ್ತರು.

error: Content is protected !!