ಬೆಳ್ತಂಗಡಿ: ಪ್ರಾಚೀನತೆಯನ್ನು ಉಳಿಸುವ ಕಾರ್ಯ ಅಳದಂಗಡಿಯಲ್ಲಿ ನಡೆದಿದ್ದು, ದೇಗುಲವನ್ನು ಕೆಂಪು ಕಲ್ಲಿನಿಂದ ಸುಂದರವಾಗಿ ನಿರ್ಮಿಸಲಾಗಿದೆ. ಕ್ಷೇತ್ರದ ವೃದ್ಧಿಯ ಜತೆಗೆ ರಕ್ಷಿಸುವ ಕಾರ್ಯ ನಿರಂತರ ಆಗಲಿ. ಊರಿನಲ್ಲಿ ಶಾಂತಿ, ನೆಮ್ಮದಿ ವೃದ್ಧಿಯಾಗಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಫೆ. 4ರಿಂದ ಮೊದಲ್ಗೊಂಡು ಫೆ. 9ರವರೆಗೆ ನಡೆಯಲಿರುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಜರಗಿದ ಧಾರ್ಮಿಕ ಸಭೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮೂಡಬಿದಿರೆ ಜೈನಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿದರು. ಧಾರ್ಮಿಕಸಭೆಯ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಿದ್ದರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ. ಪದ್ಮಪ್ರಸಾದ್ ಅಜಿಲರು ಉಗ್ರಾಣದ ಉದ್ಘಾಟನೆ ನೆರವೇರಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಅಜಿಲ ಹಸಿರುವಾಣಿ ಹೊರೆಕಾಣಿಕೆ ಹಾಗೂ ದೇಗುಲದ ಅನುವಂಶೀಯ ವಂಶಸ್ಥರಾದ ಹೇಮಂತ್ ರಾವ್ ಯರ್ಡೂರು ಭಜನಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ಸನ್ಮಾನ:
ಕ್ಷೇತ್ರದಿಂದ ಸಹಾಯಧನ ಒದಗಿಸಿದ ಡಾ. ಡಿ. ವೀರೇಂದ್ರ ಹೆಗ್ಗಡೆ, ಶಾಸಕ ಹರೀಶ್ ಪೂಂಜ, ಖ್ಯಾತ ವಾಸ್ತುತಜ್ಞ ಮಹೇಶ್ ಮುನಿಯಂಗಳ, ಮರದ ಶಿಲ್ಪಿ ವಸಂತ ಆಚಾರ್ಯ, ಮಹಾದಾನಿಗಳಾದ ವೀರಮ್ಮ ಸಂಜೀವ ಸಾಲ್ಯಾನ್, ಸೋಮನಾಥ ಮಯ್ಯ, ಅವನಿ ಮಂಜ ದೇವಾಡಿಗ, ರಾಣಿ ಶ್ರೀನಿವಾಸ ರೆಡ್ಡಿ ಹಾಗೂ ಗಾಯತ್ರಿ ವಿಶ್ವಕರ್ಮ ಸಂಘಟನ ಸಂಘ ಅಳದಂಗಡಿ ಅವರನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ:
ಮಂಗಳೂರು ಸನಾತನ ನಾಟ್ಯಾಲಯದ ನಿರ್ದೇಶನದಲ್ಲಿ ರಾಷ್ಟ ಮತ್ತು ಧರ್ಮ ಜಾಗೃತಿಯ ಪುಣ್ಯಭೂಮಿ ಭಾರತ ಎಂಬ ನೃತ್ಯ ವೈವಿಧ್ಯ ಜರಗಿತು.
ಧಾರ್ಮಿಕಸಭೆಯಲ್ಲಿ ಶ್ರೀ ಕ್ಷೇತ್ರ ಧ.ಗ್ರಾ.ಯೋ. ಕಾರ್ಯನಿರ್ವಹಣಾಧಿಕಾರಿ ಡಾ. ಎಲ್.ಎಚ್. ಮಂಜುನಾಥ್, ನಿರ್ವಹಣಾಧಿಕಾರಿ ಅನಿಲ್ ಕುಮಾರ್, ಉದ್ಯಮಿಗಳಾದ ಸುರೇಶ್ ಪೂಜಾರಿ, ಜೈದೀಪ್ ದೇವಾಡಿಗ, ಭಂಡಾರ್ಕರ್ ಕನ್ಟ್ರಕ್ಷನ್‌ನ ಗೋಕುಲ್‌ದಾಸ್ ಭಂಡಾರ್ಕರ್, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು, ದೇಗುಲದ ಪ್ರಧಾನ ಅರ್ಚಕರಾದ ಎ. ಸೋಮನಾಥ ಮಯ್ಯ, ಪಿಲ್ಯ ಬೀಡುಮನೆಯ ತಿರುಮಲೇಶ್ವರ ಪ್ರಸಾದ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಶಶಿಧರ ಡೋಂಗ್ರೆ, ಪ್ರ. ಕಾರ್ಯದರ್ಶಿ ಪಿ. ಹೆಚ್. ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರ್ ಸ್ವಾಗತಿಸಿ, ಪ್ರಸ್ತಾವಿಸಿದರು. ಶಿಕ್ಷಕ ಅಜಿತ್ ಕುಮಾರ್ ಜೈನ್ ಕೊಕ್ರಾಡಿ ನಿರೂಪಿಸಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರ. ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ ವಂದಿಸಿದರು.