ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರುವ ವಲಯ ಅರಣ್ಯಾಧಿಕಾರಿ ಎಸ್.ರಾಘವ ಪಾಟಾಳಿ ಅವರಿಗೆ 5 ವರ್ಷಗಳ ಜೈಲುಶಿಕ್ಷೆ ಹಾಗೂ 1 ಕೋಟಿ 50ಲಕ್ಷ ರೂ ದಂಡ ವಿಧಿಸಿದೆ.
ದ.ಕ.ಜಿಲ್ಲೆಯ ಬೆಳ್ತಂಗಡಿ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತಿದ್ದ ಇವರು ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿರುವುದರ ಬಗ್ಗೆ ಮಾಹಿತಿ ಪಡೆದ ಮಂಗಳೂರು ಲೋಕಯುಕ್ತ ಪೊಲೀಸರು ಜು.21, 2011ರಲ್ಲಿ ಮಂಗಳೂರು ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆಯನ್ನು ಘನ 3ನೇ ಹೆಚ್ಚುವರಿ ಜಿಲ್ಲಾ ಸತ್ರ (ವಿಶೇಷ) ನ್ಯಾಯಾಲಯ ಮಂಗಳೂರು ಇದರ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಇವರು ನಡೆಸಿದ್ದು ಜ. 27 ರಂದು, ಅಂತಿಮ ತೀರ್ಪು ಪ್ರಕಟಿಸಿದ್ದಾರೆ. 05 ವರ್ಷಗಳ ಸಾದಾ ಸಜೆ, 1ಕೋಟಿ 50 ಲಕ್ಷ ರೂ ದಂಡ ವಿಧಿಸಿದ್ದು, ಆರೋಪಿಯು ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ 11 ವರ್ಷಗಳ ಕಾಲ ಸಾದಾ ಸಜೆ ಶಿಕ್ಷೆಯನ್ನು ಪ್ರಕಟಿಸುವುದರ ಜೊತೆಗೆ 295 ಪುಟಗಳ ಸುಧೀರ್ಘ ಅಂತಿಮ ತೀರ್ಪನ್ನು ಘನ ನ್ಯಾಯಾಧೀಶರು
ಹೊರಡಿಸಿದ್ದಾರೆ.
ಉದಯ ಎಂ ನಾಯಕ್, ಪೊಲೀಸ್ ನಿರೀಕ್ಷಕರು
ಪಿರ್ಯಾದುದಾರರಾಗಿದ್ದು, ಪ್ರಕರಣದ ತನಿಖೆಯನ್ನು ವಿಠಲ್ ದಾಸ್ ಪೈ ಪೊಲೀಸ್ ಉಪಾಧೀಕ್ಷಕರು, ಕಲೋ ಮಂಗಳೂರು ರವರು ನಡೆಸಿ, ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ. ರವೀಂದ್ರ ಮುನ್ನಿಪಾಡಿ, ವಿಶೇಷ ಸಾರ್ವಜನಿಕ ಅಭಿಯೋಜಕರು, ಕರ್ನಾಟಕ ಲೋಕಾಯುಕ್ತ ಮಂಗಳೂರು ಇವರು ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ.