ಪುಂಜಾಲಕಟ್ಟೆ: ಕೋವಿಡ್ 19ರ ಸಾಂಕ್ರಾಮಿಕ ಪರಿಣಾಮವಾಗಿ ಉಂಟಾಗಿರುವ ಕಲಿಕಾ ಕೊರತೆಯನ್ನು ಸರಿದೂಗಿಸಲು ಕರ್ನಾಟಕ ಸರಕಾರವು 2022-23ನ್ನು ಕಲಿಕಾ ಚೇತರಿಕಾ ವರ್ಷವಾಗಿ ಆಚರಿಸಲು ನಿರ್ಧರಿಸಿದ್ದು ಈಗಾಗಲೇ ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ವಿಚಾರಗಳನ್ನು ಸಮುದಾಯಕ್ಕೆ ತಿಳಿಯಪಡಿಸುವ ಉದ್ದೇಶದಿಂದ ಜ. 19 ಮತ್ತು 20ರಂದು ಕರ್ನಾಟಕ ಪಬ್ಲಿಕ್ಸ್ಕೂಲ್ನ ಪ್ರೌಢಶಾಲಾ ವಿಭಾಗದಲ್ಲಿ ವಿಶೇಷ ಕಾರ್ಯಕ್ರಮ ‘ಕಲಿಕಾ ಹಬ್ಬ’ ನಡೆಯಿದೆ.
ಸಂತಸದಾಯಕವಾಗಿ ಕಲಿಕಾ ಫಲಗಳನ್ನು ಆದರಿಸಿ ಚಟುವಟಿಕೆಗಳ ಮೂಲಕ ಇಲ್ಲಿ ವಿದ್ಯಾರ್ಥಿಗಳು ಕೌಶಲ್ಯವನ್ನು ವ್ಯಕ್ತಪಡಿಸಿ ನಾಲ್ಕು ಮೂಲೆಗಳಲ್ಲಿ ಕಾರ್ಯಪ್ರವೃತ್ತರಾಗಿ ಪರಿಣಾಮಕಾರಿಯಾದ ಕಲಿಕೆಯನ್ನು ಪ್ರದರ್ಶಿಸುತ್ತಾರೆ.
ಒಂದನೇ ಕಾರ್ನರ್ ‘ಆಡು-ಹಾಡು’ ಆಗಿದ್ದು ಭಾಷಾ ಕೌಶಲ್ಯಕ್ಕೆ ಪ್ರಾಧಾನ್ಯತೆ ಇದ್ದು ಪದಬಂಧ, ಚುಟುಕು, ಹನಿಗವನ, ಹಾಡು ಹಾಡುವ, ಕತೆ ರಚಿಸುವ ಇತ್ಯಾದಿ ಕಾರ್ಯಗಳನ್ನು ಈ ಗುಂಪಿನಲ್ಲಿ ತಿಳಿಯಪಡಿಸಲಾಗುತ್ತದೆ.
ಎರಡನೇ ಕಾರ್ನರ್ ‘ಕಾಗದ-ಕತ್ತರಿ’ ಬಣ್ಣ ಆಗಿದ್ದು ವಿದ್ಯಾರ್ಥಿಗಳು ಕಾಗದದ ಮುಖಾಂತರ ಬೇರೆ ಬೇರೆ ಆಕೃತಿಗಳನ್ನು ರಚಿಸಿ ಕೈ ಚಳಕದೊಂದಿಗೆ ಕೌಶಲ್ಯ ಪ್ರದರ್ಶಿಸುತ್ತಾರೆ.
ಮೂರನೇ ಕಾರ್ನರ್ ‘ಮಾಡು-ಹಾಡು’ ಆಗಿದ್ದು, ಇಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಗಣಿತದ ಕೌಶಲ್ಯಗಳನ್ನು ಪ್ರದರ್ಶಿಸುವುದರೊಂದಿಗೆ ತಮ್ಮ ತಮ್ಮಲ್ಲಿ ಚರ್ಚಿಸಿ ತಾರ್ಕಿಕವಾಗಿ ಆಲೋಚಿಸಿ ಸಮಸ್ಯೆಗಳಿಗೆ ಪರಿಹಾರವನ್ನು ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಪಡೆಯಲಿದ್ದಾರೆ.
ನಾಲ್ಕನೇ ಕಾರ್ನರ್ ‘ಊರು ಸುತ್ತೋಣ’ ಇಲ್ಲಿ ವಿದ್ಯಾರ್ಥಿಗಳು ಒಂದು ಮರದ ಅಧ್ಯಯನ, ಜೈವಿಕ ಲೋಕ ಅರಿಯೋಣ, ಸಂದರ್ಶನ ಹಾಗೂ ಕರಡು ನಕ್ಷೆ ರಚನೆಯ ಬಗ್ಗೆ ತಿಳಿದುಕೊಳ್ಳಲಿದ್ದಾರೆ. ಈ ಎಲ್ಲಾ ಕಲಿಕಾ ಹಬ್ಬಕ್ಕೆ ಈಗಾಗಲೇ ಪೂರ್ವಸಿದ್ಧತೆಗಳನ್ನು ಏರ್ಪಡಿಸಲಾಗುತ್ತಿದ್ದು, ಪುಂಜಾಲಕಟ್ಟೆ ಕ್ಲಸ್ಟರ್ ವ್ಯಾಪ್ತಿಯ 11 ಶಾಲೆಗಳ 120 ವಿದ್ಯಾರ್ಥಿಗಳು ಭಾಗವಹಿಸಲಿದ್ದು ಐದು ಸಂಪನ್ಮೂಲ ವ್ಯಕ್ತಿಗಳು ವಿಷಯಗಳನ್ನು ಮನದಟ್ಟು ಮಾಡಲಿದ್ದಾರೆ.
ಈ ಕಾರ್ಯಕ್ಕೆ ಬೆಳ್ತಂಗಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿರೂಪಾಕ್ಷಪ್ಪ ಹೆಚ್.ಎಸ್ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶಂಭುಶಂಕರ್ ಇವರ ನಿರ್ದೇಶನದಡಿಯಲ್ಲಿ ಪುಂಜಾಲಕಟ್ಟೆ ಸಮೂಹ ಸಂಪನ್ಮೂಲ ವ್ಯಕ್ತಿ ಚೇತನ ಹಾಗೂ ಈ ಕಲಿಕಾ ಹಬ್ಬದ ನೋಡಲ್ ಅಧಿಕಾರಿ ಕರ್ನಾಟಕ ಪಬ್ಲಿಕ್ಸ್ಕೂಲ್ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರಾದ ಉದಯ ಕುಮಾರ್ ಬಿ. ಸೂಕ್ತ ಸಲಹೆ ಸೂಚನೆಗಳನ್ನು ಕಾಲಕಾಲಕ್ಕೆ ಸರಿಯಾಗಿ ನೀಡುತ್ತಿದ್ದಾರೆ. ಈ ಹಬ್ಬದ ಯಶಸ್ಸಿಗಾಗಿ ಗ್ರಾಮ ಪಂಚಾಯತ್ ಮಡಂತ್ಯಾರು, ಮಾಲಾಡಿ ಮತ್ತು ಮಚ್ಚಿನ ಹಾಗೂ ಜೆಸಿಐ ಮಡಂತ್ಯಾರು, ರೋಟರಿ ಕ್ಲಬ್ ಮಡಂತ್ಯಾರು ಹಾಗೂ ವರ್ತಕರ ಸಂಘ ಮಡಂತ್ಯಾರು ಇವರು ಸಹಭಾಗಿತ್ವವನ್ನು ನೀಡುತ್ತಿದ್ದಾರೆ.