ರಂಜನ್ ಗೌಡ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ…?: ಬೆಳ್ತಂಗಡಿ ‘ಕೈ’ ಅಭ್ಯರ್ಥಿ ಬಗ್ಗೆ ಮುಂದುವರಿದ ಗೊಂದಲ…!: ಬೆಳ್ತಂಗಡಿ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿದೆ ಬಿಸಿ ಬಿಸಿ ಚರ್ಚೆ: ರೇಸ್ ನಲ್ಲಿ ತಾಲೂಕಿನ ಯುವ ಮುಖಂಡರು!

 

 

ಬೆಳ್ತಂಗಡಿ: ಇನ್ನೆರಡು ತಿಂಗಳಲ್ಲಿ ವಿಧಾನ ಸಭಾ ಚುನಾವಣೆ ಘೋಷಣೆಯಾಗಲಿದ್ದು ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಈಗಾಗಲೇ  ಬೆಳ್ತಂಗಡಿ  ಬಿಜೆಪಿಯಲ್ಲಿ ಟಿಕೆಟ್  ಶಾಸಕ ಹರೀಶ್ ಪೂಂಜ ಅವರಿಗೆ  ನಿಗದಿಯಾಗಿದೆ. ಅದರೆ ಕಾಂಗ್ರೆಸ್ಸಿನಲ್ಲಿ ಮಾತ್ರ ಹಲವಾರು ಆಕಾಂಕ್ಷಿಗಳು ಟಿಕೆಟ್ ಗಾಗಿ ತುದಿ ಕಾಲಲ್ಲಿ ನಿಂತಿದ್ದಾರೆ.
ಮಾಜಿ ಶಾಸಕ ವಸಂತ ಬಂಗೇರ, ಮಾಜಿ ಸಚಿವ ಗಂಗಾಧರ ಗೌಡ, ಹಾಗೂ   ರಕ್ಷಿತ್ ಶಿವರಾಂ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇವರಷ್ಟೇ ಅಲ್ಲದೆ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಅವರ ಪುತ್ರ ಅಭಿನಂದನ್ ಹರೀಶ್ ಕುಮಾರ್, ರಂಜನ್ ಜಿ. ಗೌಡ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದು ಬೆಳ್ತಂಗಡಿ ಕಾಂಗ್ರೆಸ್ಸಿನಲ್ಲಿ ಟಿಕೆಟ್ ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ.‌
ಕಳೆದ ಬಾರಿಯ ವಿಧಾನ‌ಸಭಾ‌‌ ಚುನಾವಣೆ ಸಂದರ್ಭದಲ್ಲಿ ಅಂತಿಮ ಹಂತದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿ, ಕಾಂಗ್ರೆಸ್ ಸೇರಿದ್ದ ಮಾಜಿ ಸಚಿವ ಗಂಗಾಧರ ಗೌಡ ಅವರು ಟಿಕೆಟ್ ತನಗೆ ಎನ್ನುತ್ತಾ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ತನ್ನ ಕಾಲೇಜಿನಲ್ಲಿ ಕಾಂಗ್ರೆಸ್ ಪಕ್ಷದ ಕ್ರೀಡಾಕೂಟಕ್ಕೆ ಆಹ್ವಾನಿಸಿದ್ದು  ರಾಜಕೀಯ ಶಕ್ತಿ ಪ್ರದರ್ಶನಕ್ಕಾಗಿ ಎಂದು ಜನರಾಡಿಕೊಳ್ಳುತಿದ್ದಾರೆ. ಅದಲ್ಲದೇ ಟಿಕೇಟ್ ಗಾಗಿ ಅರ್ಜಿ ಸಲ್ಲಿಸಿದ್ದ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ಬಗ್ಗೆ ಅಸಾಮಾಧಾನ ಹೊರಹಾಕಿ ಯಾವುದೇ ಕಾರಣಕ್ಕೂ ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಬಾರದು, ನನಗೆ ಅಥವಾ ವಸಂತ ಬಂಗೇರ ಅವರಿಗೆ ಟಿಕೇಟ್ ನಿಶ್ಚಿತ ಎಂಬ  ಹೇಳಿಕೆಯನ್ನು ನೀಡಿದ್ದಾರೆ. ಈ ಬಗ್ಗೆ ಮಾಜಿ ಶಾಸಕ ವಸಂತ ಬಂಗೇರ ಕೂಡ ಗಂಗಾಧರ ಗೌಡ ಮಾತಿಗೆ ಧ್ವನಿ ಸೇರಿಸಿದ್ದಲ್ಲದೇ ಕೆಲವು ದಿನಗಳ ಹಿಂದೆ ರಕ್ಷಿತ್ ಶಿವರಾಂ ನೇತೃತ್ವದ ನೇತ್ರಾವತಿ ಉಳಿಸಿ ಜಾಥಾಕ್ಕೆ ಬೆಂಬಲ ಇಲ್ಲ ಎಂಬ ಗೊಂದಲಕಾರಿ ಹೇಳಿಕೆ ನೀಡಿದ್ದಲ್ಲದೇ ಅದಕ್ಕೆ ವಿರುದ್ಧವಾಗಿ ದಿಢೀರನೆ ಮುಗೇರಡ್ಕ ಚಲೋ ಪ್ರತಿಭಟನೆಯನ್ನು ಆಯೋಜಿಸಿದ್ದರು. ಅ ನಂತರ  ವಸಂತ ಬಂಗೇರ ಅವರು ಸಭೆಯೊಂದರಲ್ಲಿ  ಚುನಾವಣೆ ಸ್ಪರ್ಧಿಸುವುದಿಲ್ಲ ಟಿಕೆಟ್ ಯಾರಿಗೆ ನೀಡಿದರೂ ಬೆಂಬಲ ನೀಡುತ್ತೇನೆ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಯ ನಂತರ ರಂಜನ್ ಗೌಡ ಅವರಿಗೆ ಮುಂದಿನ ಟಿಕೆಟ್ ಎಂಬ ಸುದ್ಧಿಗಳು ಬೆಳ್ತಂಗಡಿ ಕಾಂಗ್ರೆಸ್ ವಲಯದಲ್ಲಿ  ಹರಿದಾಡುತಿದ್ದು ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಗಂಗಾಧರ ಗೌಡ ಕೂಡ ನನಗೆ ಟಿಕೇಟ್ ನೀಡದಿದ್ರೆ ಮಗ ರಂಜನ್ ಗೌಡ ಅವರಿಗೆ ನೀಡಬೇಕು ಎಂಬ ಬಗ್ಗೆ ಕಾಂಗ್ರೆಸ್ ನಾಯಕರುಗಳಲ್ಲಿ ಒತ್ತಾಯಿಸುತಿದ್ದಾರೆ ಈ ಬಗ್ಗೆ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು  ಬೆಂಗಳೂರಿಗೆ ತೆರಳಿದ್ದಾರೆ  ಎಂಬ  ಮಾತುಗಳೂ ಕೇಳಿಬರುತಿದೆ. ಏನಿದ್ದರೂ ಬೆಳ್ತಂಗಡಿಯ ಕಾಂಗ್ರೆಸ್ಸಿನಲ್ಲಿ ದಿನಕ್ಕೊಂದು ನಾಟಕೀಯ ಬೆಳವಣಿಗೆ ನಡೆಯುತ್ತಿದೆ ಕೊನೆಯ ಕ್ಷಣ ಹೈಕಮಾಂಡ್ ಯುವ ಮುಖಂಡರುಗಳಾದ ರಂಜನ್ ಗೌಡ , ರಕ್ಷಿತ್ ಶಿವರಾಂ ಅಥವಾ ಬೇರೆ   ಯಾರಿಗೆ ಟಿಕೇಟ್ ನೀಡುತ್ತದೆ ಎಂದು ಎಲ್ಲರೂ ಕುತೂಹಲದಿಂದ ಕಾಯುತಿದ್ದಾರೆ..

error: Content is protected !!