ಬೆಳ್ತಂಗಡಿ: ಬೆಳ್ತಂಗಡಿ ಕೇಂದ್ರ ಭಾಗದಲ್ಲೇ ಕಳ್ಳನೊಬ್ಬ ತನ್ನ ಕೈಚಳಕ ಮೆರೆದಿರುವುದು ಪೊಲೀಸರಿಗೆ ಹಾಗೂ ವ್ಯಾಪಾರಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ. ಸಿಸಿ ಕ್ಯಾಮಾರಾಗಳಿಗೆ ಬಟ್ಟೆ ಸುತ್ತಿ, ಸ್ಥಳೀಯ ಡ್ರೈವಿಂಗ್ ಸ್ಕೂಲ್ ಒಂದಕ್ಕೆ ನುಗ್ಗಿದ್ದು, ಏನೂ ಸಿಗದೆ ಕಳ್ಳ ಕಾಲ್ಕಿತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಗಾರ್ಡನ್ ಬಾರ್ ಬಳಿ ಘಟನೆ:
ಜ.12 ರಂದು ರಾತ್ರಿ ಸುಮಾರು 1:56 ಗಂಟೆಗೆ ಬೆಳ್ತಂಗಡಿ ಬಸ್ ನಿಲ್ದಾಣದ ಬಳಿಯ ಗರ್ಡಾನ್ ಬಾರ್ ಪಕ್ಕದಲ್ಲಿರುವ ಬಿರ್ಮೋಟ್ಟು ಮೋಟಾರು ಡ್ರೈವಿಂಗ್ ಸ್ಕೂಲ್ ಒಂದರ ಶಟರ್ ಬೀಗಮುರಿದು ಕಳ್ಳ ಒಳನುಗ್ಗಿದ್ದಾನೆ. ಆದರೆ ಅದಕ್ಕೂ ಮುನ್ನ ಗಾರ್ಡನ್ ಬಾರ್ ಹಿಂಭಾಗದಲ್ಲಿರುವ ನಿಸರ್ಗ ಹೋಟೆಲ್ ನ ಸಿಸಿ ಕ್ಯಾಮರಕ್ಕೆ ಬಟ್ಟೆ ಕಟ್ಟಿ, ವಿದ್ಯುತ್ ಬಲ್ಬ್ ತೆಗೆದಿದ್ದಾನೆ. ಬಳಿಕ ಅಲ್ಲಿಂದ ಸಮೀಪದಲ್ಲೇ ಇರುವ 3ಸ್ಟಾರ್ ವೈನ್ ಶಾಪ್ ಬಳಿ ಬಂದು ಪಕ್ಕದ ಗುರುಕೃಪಾ ಹೋಟೆಲ್ ಶಟರಿನ ಬೀಗ ಮುರಿಯಲು ಯತ್ನಿಸಿದ್ದ, ಆದರೆ ಅಲ್ಲಿ ಏನೂ ಮಾಡಲಾಗದೆ ನಂತರ ಗಾರ್ಡನ್ ಬಾರ್ ಹಿಂಬದಿಯ ಮೂಲಕ ಬಂದು ಅಲ್ಲಿಯೂ ಸಿಸಿಕ್ಯಾಮಕ್ಕೆ ಬಟ್ಟೆ ಕಟ್ಟಿ ಲೈಟ್ ತೆಗೆದಿದ್ದಾನೆ. ಈ ವೇಳೆ ಪಕ್ಕದಲ್ಲಿ ರೂಂ ಇರುವುದನ್ನು ನೋಡಿ ಒಳಗಡೆ ಇದ್ದವರು ಶಬ್ದ ಕೇಳಿ ಹೊರಬಾರದು ಎಂದು ಬಾಗಿಲಿನ ಲಾಕ್ ಗೆ ಹಗ್ಗ ಕಟ್ಟಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಶಾಪಿನ ಶಟರ್ ಬೀಗ ಮುರಿದು ನುಗ್ಗಿದ್ದಾನೆ. ಅಲ್ಲಿ ಹಣಕ್ಕಾಗಿ ದಾಖಲೆ ಮತ್ತು ಕಪಾಟುಗಳನ್ನು ಹುಡುಕಾಡಿದ್ದಾನೆ. ಆದರೆ ಅಲ್ಲಿ ಏನೂ ಸಿಗದೆ ಬರಿಗೈಯಲ್ಲಿ ವಾಪಸ್ ಹೋಗಿದ್ದಾನೆ.
ಸಿಸಿಯಲ್ಲಿ ಕೃತ್ಯ ದಾಖಲು:
ಬೆಳಗ್ಗೆ ಬಾರ್ ಸಿಬ್ಬಂದಿಗಳಿಬ್ಬರು ರೂಂ ನಿಂದ ಹೊರಗಡೆ ಬಂದಾಗ ಕಳ್ಳತನದ ಘಟನೆ ಬೆಳಕಿಗೆ ಬಂದಿದೆ. ಚಾಲಾಕಿ ಕಳ್ಳ ಸಿಸಿಗೆ ಬಟ್ಟೆ ಸುತ್ತಿದ್ದ, ತನ್ನ ಕೃತ್ಯ ಯಾರಿಗೂ ತಿಳಿದಿಲ್ಲ ಎಂದುಕೊಂಡಿದ್ದ. ಆದರೆ ಗುರುಕೃಪಾ ಹೊಟೇಲ್ ಗೆ ಕನ್ನ ಹಾಕಲು ಯತ್ನಿಸುವ ದೃಶ್ಯ ಬಸ್ ನಿಲ್ದಾಣದ ಪಕ್ಕದ ಅಂಗಡಿಯೊಂದರ ಸಿಸಿಕ್ಯಾಮರದಲ್ಲಿ ಸೆರೆಯಾಗಿದೆ.
ಒಬ್ಬಂಟಿ ಕಳ್ಳನ ಉಪಟಳದಿಂದ ಬೆಳ್ತಂಗಡಿಯ ಅಂಗಡಿ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ. ಇತ್ತ ಕಳ್ಳ ಪತ್ತೆಯಾಗದೆ ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದ್ದಾನೆ.