‘ಕರಿ ಹೈದ ಕರಿಯಜ್ಜ’ ಶೂಟಿಂಗ್ ಸೆಟ್‌ನಲ್ಲಿ ಕೊರಗಜ್ಜನ ಕಾರ್ಣಿಕ..!: ಬುರ್ದುಗೋಳಿ ಕೊರಗಜ್ಜ-ಗುಳಿಗಜ್ಜ ದೈವಕ್ಕೆ ಚಿತ್ರತಂಡದಿಂದ ಹರಕೆ ಸಲ್ಲಿಕೆ: ಸಿನಿಮಾ ಸೆಟ್‌ನಲ್ಲಿ ನಡೆದ ಘಟನೆಗಳನ್ನು ಎಳೆ-ಎಳೆಯಾಗಿ ವಿವರಿಸಿದ ಚಿತ್ರತಂಡ..

ದ.ಕ: ಕನ್ನಡ ಸಿನಿಮಾ ರಂಗದಲ್ಲಿ ಕಾಂತಾರ ಚಿತ್ರದ ಅಬ್ಬರ ಇನ್ನೂ ಮುಗಿದಿಲ್ಲ. ಕರಾವಳಿಯ ಸಂಸ್ಕೃತಿ, ಆಚಾರ, ನಂಬಿಕೆ, ಸಾಮಾಜಿಕ ಚಿತ್ರಣದ ಜೊತೆಗೆ ದೈವದ ಕಾರ್ಣಿಕವನ್ನು ಪ್ರೇಕ್ಷಕರಿಗೆ ಅದ್ಭುತವಾಗಿ ಉಣಬಡಿಸಿದೆ ಕಾಂತಾರ. ಇದೀಗ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ದೈವದ ಕುರಿತಾಗಿ ಸಿನಿಮಾ ತಯಾರಾಗುತ್ತಿದ್ದು ಶೇ.99 ರಷ್ಟು ಚಿತ್ರೀಕರಣವೂ ಮುಕ್ತಾಯವಾಗಿದೆ.

ತ್ರಿವಿಕ್ರಮ ಸಾಫಲ್ಯ ನಿರ್ಮಾಣದಲ್ಲಿ,  ಸುಧೀರ್ ಅತ್ತಾವರ್  ನಿದೇರ್ಶನದಲ್ಲಿ ಮೂಡಿಬರುತ್ತಿರುವ ‘ಕರಿ ಹೈದ ಕರಿಯಜ್ಜ’ ಸಿನಿಮಾ ಕೆಲವೇ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಕಲ್ಲಾಪು ಬುರ್ದುಗೋಳಿಯಲ್ಲಿ ಹೇಳಿದ್ದಾರೆ. ಬುರ್ದುಗೋಳಿಯ ಕೊರಗಜ್ಜ-ಗುಳಿಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಇಂದು ಚಿತ್ರ ತಂಡವು ಭೇಟಿ ನೀಡಿ ಗುಳಿಗನಿಗೆ ಹರಕೆಯ ಹುಂಜವನ್ನು ಸಮರ್ಪಿಸಿ ಬಳಿಕ ಸಿನಿಮಾದ ಕುರಿತು ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ಸಿನಿಮಾದಲ್ಲಿ ಕೊರಗಜ್ಜನ 800 ವರ್ಷಗಳ ಐತಿಹ್ಯದ ಕಥೆಯನ್ನೇ ಅಳವಡಿಸಲಾಗಿದ್ದು , ದಕ್ಷಿಣ ಕನ್ನಡ ಜಿಲ್ಲೆಯ ಬಂಗಾಡಿ, ಮಡಂತ್ಯಾರಿನ ಕುಕ್ಕಳ, ಮಚ್ಚಿನ ಗ್ರಾಮದ ಪೆರೂರು, ಸೋಮೇಶ್ವರ, ಉಳ್ಳಾಲ ಪ್ರದೇಶಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಶೇ.99 ರಷ್ಟು ಚಿತ್ರೀಕರಣವು ಪೂರ್ಣಗೊಂಡಿದ್ದು, ಎಪ್ರಿಲ್, ಮೇ ತಿಂಗಳಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ. ಈ ಚಿತ್ರ ತುಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದಿದ್ದಾರೆ.


ದೈವದ ಮುಂದೆ ಪ್ರಾರ್ಥನೆ ಸಲ್ಲಿಸಿದಾಗ ಸಿನಿಮಾ ಸೆಟ್‌ನಲ್ಲಿ ನಡೆದ ಘಟನೆಗಳನ್ನು ನಿರ್ದೇಶಕ ಸುಧೀರ್ ಅತ್ತಾವರ್ ಅವರು ವಿವರಿಸಿದ್ದಾರೆ. ‘ನೇತ್ರಾವತಿ ನದಿ ತಟದಲ್ಲಿ ನಡೆಯುತ್ತಿದ್ದ ಶೂಟಿಂಗ್ ಸೆಟ್‌ಗೆ ಹರೇಕಳದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಷೋಲೈಟ್ ಅಡ್ಡಿಯುಂಟು ಮಾಡುತ್ತಿತ್ತು. ಕಲಾವಿದರೆಲ್ಲರೂ ಮೇಕಪ್ ಮಾಡಿ, ದೋಣಿಗಳ ಮೂಲಕ ಶೂಟಿಂಗ್ ನಡೆಸುವಾಗ ಅಡಚಣೆಗಳೇ ಜಾಸ್ತಿಯಾಗಿತ್ತು. ಅಂದು ಶೂಟಿಂಗ್ ನಿಲ್ಲುತ್ತಿದ್ದರೆ, ನಮಗೆ ಲಕ್ಷಾಂತರ ನಷ್ಟ ಸಂಭವಿಸುವುದರಲ್ಲಿತ್ತು. ಆದರೆ ಕೊರಗಜ್ಜನನ್ನು ಸ್ಮರಿಸಿದಾಗ ಪವಾಡವೆಂಬಂತೆ ಷೋಲೈಟ್‌ಗೆ ಅಡ್ಡವಾಗಿ ದೋಣಿಯೊಂದು ಬಂದು ನಿಂತು ಸೀನ್ ಶೂಟಿಂಗ್ ಯಾವುದೇ ಅಡಚಣೆಯಿಲ್ಲದೆ ನಡೆಯಿತು. ಇಂತಹ ಪವಾಡಗಳು ಜಿಲ್ಲೆಯ ವಿವಿದೆಡೆ ನಡೆದಿದ್ದು, ಕೊರಗಜ್ಜನ ಕೃಪೆಯಿಂದ ಯಶಸ್ವಿಯಾಗಿ ಶೂಟಿಂಗ್ ನಡೆದಿದೆ ಎಂದು ತಿಳಿಸಿದರು.’

ಇಂದು ನಟಿ ಭವ್ಯ ಅವರ ಜನುಮ ದಿನವಾಗಿದ್ದು, ಈ ದಿನ ಕೊರಗಜ್ಜನ ಕ್ಷೇತ್ರಕ್ಕೆ ಮೊದಲ ಬಾರಿ ಭೇಟಿ ನೀಡಿದ ನಟಿ ಭವ್ಯ ನಿಜಕ್ಕೂ ನನಗೆ ಸಿಕ್ಕಿದ ಸೌಭಾಗ್ಯ ಎಂದಿದ್ದಾರೆ. ಜನಪ್ರಿಯ ನಟಿ ಶೃತಿ ಅವರು ಕೊರಗಜ್ಜ-ಗುಳಿಗಜ್ಜನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ವೇಳೆ ಬುರ್ದುಗೋಳಿ ಕ್ಷೇತ್ರದ ಅಧ್ಯಕ್ಷರಾದ ವಿಶ್ವನಾಥ್ ನಾಯ್ಕ್ ಕಲ್ಲಾಪು, ಭಂಡಾರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಪ್ರಮುಖರಾದ ಪ್ರಶಾಂತ್ ಗಟ್ಟಿ ಕಾಯಂಗಳ, ಪುರುಷೋತ್ತಮ ಕಲ್ಲಾಪು, ಪ್ರವೀಣ್ ಎಸ್.ಕುಂಪಲ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಚಿತ್ರತಂಡವು ನಂದಿಗುಡ್ಡೆ ಕೊರಗಜ್ಜನ ಕ್ಷೇತ್ರಕ್ಕೆ ಹರಕೆಯ ಕೋಲ ನೀಡಲು ತೆರಳಿದ್ದಾರೆ.

error: Content is protected !!