ಬೆಳ್ತಂಗಡಿ : ‘ವ್ಯಕ್ತಿಯೊಬ್ಬರಿಗೆ ರಕ್ತದಾನ ಮಾಡುವುದು ನಮ್ಮ ಜೀವದಾನ ಮಾಡುವುದಕ್ಕೆ ಸಮಾನ. ನಮ್ಮಿಂದ ಆಸ್ತಿ ಸಂಪತ್ತು ದಾನ ಮಾಡಲು ಅಸಾಧ್ಯವಾದರೂ ರಕ್ತದಾನ ಮಾಡುವ ಸಂಕಲ್ಪವನ್ನು ಪ್ರತಿಯೊಬ್ಬರೂ ತನ್ನ ಬದುಕಿನ ಉದ್ದಕ್ಕೂ ಇಟ್ಟುಕೊಳ್ಳಬೇಕು’ ಎಂದು ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದ್ದಾರೆ.
ತಮ್ಮ 78ನೇ ಹುಟ್ಟು ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಘ (ರಿ) ಮಂಗಳೂರು, ರೆಡ್ ಸೊಸೈಟಿ ಬೆಳ್ತಂಗಡಿ ಹಾಗೂ ಶ್ರೀ ಗುರುದೇವ ಎಜುಕೇಶನ್ ಟ್ರಸ್ಟ್ (ರಿ) ಬೆಳ್ತಂಗಡಿ ಇದರ ಸಹಯೋಗದೊಂದಿಗೆ ನಡೆಸಿದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಈ ಪ್ರಕೃತಿಯಲ್ಲಿ ಕೃತಕವಾಗಿ ತಯಾರು ಮಾಡಲು ಅಸಾಧ್ಯವಾದುದು ರಕ್ತ. ರಕ್ತದಾನ ಜೀವ ಉಳಿಸುವ ಬದುಕಿನ ಪುಣ್ಯದ ಕಾರ್ಯ.ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವ ಶ್ರೇಷ್ಠ ಕಾರ್ಯವನ್ನು ಮಾಡಬೇಕು’ ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಹೇಳಿದರು.
ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಸ್ವತಃ ರಕ್ತದಾನ ಮಾಡಿದ್ದು, ಬಳಿಕ ಮಾತನಾಡಿ,’ ವಸಂತ ಬಂಗೇರರು ಸಮಸ್ತ ಸಮಾಜದ ಆಸ್ತಿಯಾಗಿದ್ದಾರೆ. ಅವರು ಎಲ್ಲರಿಗೂ ಪ್ರೇರಣಾದಾಯಕ ವ್ಯಕ್ತಿತ್ವ ಬೆಳೆಸಿಕೊಂಡವರು. ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚು ಒತ್ತು ಕೊಟ್ಟು ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತಗಳನ್ನು ಬದುಕಿನಲ್ಲಿ ಪಾಲಿಸುತ್ತಾ ಬಂದವರು . ಅವರು ಆರಂಭಿಸಿದ ಶ್ರೀ ಗುರುದೇವ ವಿದ್ಯಾ ಸಂಸ್ಥೆ ಕರಾವಳಿ ಭಾಗದ ಶ್ರೇಷ್ಠ ಸಂಸ್ಥೆಯಾಗಿ ಬೆಳೆಯುವುದರಲ್ಲಿ ಅನುಮಾನವಿಲ್ಲ. ಅವರ ಅಭಿಮಾನಿಗಳು ರಕ್ತದಾನ ಶಿಬಿರದ ಮೂಲಕ ಅವರ ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದು ಮಾದರಿ ಕಾರ್ಯ’ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಬೆಳ್ತಂಗಡಿ ಘಟಕದ ಅಧ್ಯಕ್ಷ ಹರಿದಾಸ್ ಎಸ್.ಎಂ ಮಾತನಾಡಿ, ‘ ವಸಂತ ಬಂಗೇರ ತಾಲ್ಲೂಕಿನ ಅಪರೂಪದ ರಾಜಕಾರಣಿ. ಸೋತರೂ ಗೆದ್ದರೂ ಜನರ ಮಧ್ಯೆ ಇದ್ದು ಜನರ ಸಮಸ್ಯೆಗೆ ಸ್ಪಂದಿಸುವವರು. ಅವರ ಹುಟ್ಟು ಹಬ್ಬದ ದಿನ ಅವರ ಅಭಿಮಾನಿಗಳು ಹಮ್ಮಿಕೊಂಡಿರುವ ರಕ್ತದಾನ ಕಾರ್ಯ ಸಾರ್ಥಕ ಕಾರ್ಯ’ ಎಂದರು.
ಶ್ರೀ ಗುರುದೇವ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಕೆ. ವಸಂತ ಬಂಗೇರ ರನ್ನು ಗೌರವಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಹುಲ್ ಹಮೀದ್, ವಕೀಲ ಮನೋಹರ್ ಕುಮಾರ್, ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ ಶುಭ ಹಾರೈಸಿದರು.
ವೇದಿಕೆಯಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಯಶವಂತ ಪಟವರ್ಧನ್, ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಉಪಸ್ಥಿತರಿದ್ದರು..
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಘ (ರಿ) ಮಂಗಳೂರು ಇದರ ಅಧ್ಯಕ್ಷ ಶಿವಕುಮಾರ್ ಎಸ್.ಎಂ ಸ್ವಾಗತಿಸಿ, . ಶೇಖರ್ ಲಾಯಿಲ ಪ್ರಸ್ತಾವಿಸಿ, ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಸಮೀವುಲ್ಲಾ ವಂದಿಸಿದರು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಘಟಕದ ಸದಸ್ಯೆ ಆಶಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.