ಬೆಳ್ತಂಗಡಿ: ತೋಟದಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಕುದ್ಯಾಡಿ ಗ್ರಾಮದ ಕೆಳಗಿನ ಬೆಟ್ಟು ಎಂಬಲ್ಲಿ ಜ.5ರಂದು ನಡೆದಿದೆ.
ಶೀನ ಪೂಜಾರಿ ಎಂಬವರ ತೋಟದಲ್ಲಿ ಬೆಳಿಗ್ಗೆ 11ರ ಸುಮಾರಿಗೆ ಹಸು ಮೇಯುತ್ತಿದ್ದ ಸಂದರ್ಭದಲ್ಲಿ ಹಸುವಿನ ಚೀರಾಟ ಕೇಳಿದೆ. ತಕ್ಷಣ ಮನೆಯವರು ಬಂದು ನೋಡಿದಾಗ ಹಸುವಿನ ಮೇಲೆ ಚಿರತೆ ದಾಳಿ ನಡೆಸಿತ್ತು. ಇದೇ ವೇಳೆ ಮನೆಮಂದಿಯ ಮೇಲೂ ಚಿರತೆ ದಾಳಿ ನಡೆಸಲು ಯತ್ನಿಸಿದೆ ಎನ್ನಲಾಗಿದೆ.
ಚಿರತೆಯ ದಾಳಿಗೆ ಹಸು ಮೃತಪಟ್ಟಿದ್ದು, ಬಳಿಕ ಚಿರತೆ ದಾಳಿ ನಡೆಸಿದ ಪರಿಸರದಲ್ಲಿ ಬೋನು ಅಳವಡಿಸಲಾಗಿದೆ. ವೇಣೂರು ಆರ್ ಎಫ್ ಒ ಮಹಿಮ್ ಜನ್ನು, ಡಿ ಆರ್ ಎಫ್ ಒ ಸುರೇಶ್ ಗೌಡ, ಸುಲ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತಪಟ್ಟ ಹಸುವಿಗೆ ಪರಿಹಾರ ಒದಗಿಸುವ ಭರವಸೆಯನ್ನು ಅರಣ್ಯ ಇಲಾಖೆ ನೀಡಿದೆ.