ಬೆಳ್ತಂಗಡಿ ಜ.2: ಕುದ್ಯಾಡಿ ಗ್ರಾಮದ ಅಂಗಣಗುಡ್ಡೆ, ಅಂಗಂದಮೇಲ್ ಎಂಬಲ್ಲಿನ ಕೊಡಮಣಿತ್ತಾಯ ದೈವಸ್ಥಾನ- ಬ್ರಹ್ಮಬೈದರ್ಕಳ ಗರಡಿಯು ಶಿಲಾಮಯ ಗರಡಿಯಾಗಿ ಜೀರ್ಣೋದ್ಧಾರಗೊಂಡಿದ್ದು, ಜನವರಿ 24, 25, 26ರಂದು ಪುನರ್ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ವರ್ಷಾವಧಿ ನೇಮೋತ್ಸವ ನಡೆಯಲಿದೆ. ಹೀಗಾಗಿ ಜನವರಿ 1ರಂದು ಚಪ್ಪರ ಮುಹೂರ್ತ ನಡೆಯಿತು.
ಅಳದಂಗಡಿಯ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ಆಸ್ರಣ್ಣರಾದ ಪ್ರಕಾಶ್ ಭಟ್ ಅವರ ನೇತೃತ್ವದಲ್ಲಿ, ಅಳದಂಗಡಿಯ ಖ್ಯಾತ ಹಾಗೂ ಹಿರಿಯ ವೈದ್ಯ ಡಾ. ಎನ್.ಎಂ. ತುಳುಪುಳೆ ಅವರು ವಿಧಿವಿಧಾನ ನೆರವೇರಿಸಿದರು.
ಬಳಿಕ ಸಭಾ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ತುಳುಪುಳೆ ಅವರು, “ಶುಭ ಕಾರ್ಯಕ್ರಮಗಳಿಗೆ ಚಪ್ಪರ ಬಹಳ ಅಗತ್ಯವಾಗಿದ್ದು, ಗರಡಿಯ ಕಲಶಾಭಿಷೇಕದ ಚಪ್ಪರ ಮುಹೂರ್ತದಲ್ಲಿ ಭಾಗವಹಿಸುವ ಭಾಗ್ಯ ನನಗೆ ದೊರೆತಿದೆ. ಗ್ರಾಮಸ್ಥರ ಪ್ರೀತಿಯಿಂದಾಗಿ ಇದು ಸಾಧ್ಯವಾಗಿದೆ” ಎಂದರು.
ಕಾರ್ಯಕ್ರಮದ ಅತಿಥಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಧರಣೇಂದ್ರ ಕುಮಾರ್ ಮಾತನಾಡಿ, “ಕೊಡಮಣಿತ್ತಾಯ, ಬೈದರ್ಕಳರು ನಂಬಿದವರಿಗೆ ಇಂಬು ಕೊಡುವ ಶಕ್ತಿಗಳು. ದೈವಗಳಿಗೆ ಶ್ರದ್ಧೆಯಿಂದ ನಡೆದುಕೊಳ್ಳುವುದು ಅತ್ಯಗತ್ಯ. ಇಲ್ಲಿನ ಗರಡಿಯು ತಾಲೂಕಿನಲ್ಲಿಯೇ ಅತಿ ಎತ್ತರದ ಜಾಗದಲ್ಲಿ ಇರುವುದು ವಿಶೇಷ” ಎಂದರು.
ಶ್ರೀ ಗುರುನಾರಾಯಣ ಸೇವಾ ಸಂಘ ಅಳದಂಗಡಿ ವಲಯದ ಅಧ್ಯಕ್ಷ ಸಂಜೀವ ಪೂಜಾರಿ ಕೊಡಂಗೆ, “ಹಿಂದೆ ಅರಸು ಮನೆತನದವರು ದೇವಸ್ಥಾನ-ದೈವಸ್ಥಾನ ಕಟ್ಟಿಸುತ್ತಿದ್ದರು. ಈಗ ಜನರಿಗೆ ಆ ಶಕ್ತಿ ಬಂದಿದೆ. ಕುದ್ಯಾಡಿಯ ಜನರು ಗರಡಿಯನ್ನು ಜೀರ್ಣೋದ್ಧಾರಗೊಳಿಸಿ ಶಿಲಾಮಯ ಗರಡಿಯನ್ನಾಗಿ ಮಾಡಿದ್ದಾರೆ” ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕುದ್ಯಾಡಿ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ ಕುದ್ಯಾಡಿಗುತ್ತು, “ಕೊರಗಪ್ಪ ಪೂಜಾರಿ ಕೊಡಿಬಾಳೆ ಅವರಂಥ ಗ್ರಾಮದ ಹಿರಿಯರ ಮಾರ್ಗದರ್ಶನ, ಯುವಕರ ಶ್ರಮ, ಉಮೇದಿನಿಂದ ಗರಡಿಯು ಸುಂದರವಾಗಿ ನವೀಕರಣಗೊಂಡು ಎದ್ದು ನಿಂತಿದೆ” ಎಂದರು.
ಡಾ ಎನ್ ಎಂ ತುಳುಪುಳೆ ಅವರು ಗರಡಿ ಜೀರ್ಣೋದ್ಧಾರಕ್ಕೆ ತಮ್ಮ ವತಿಯಿಂದ 52,000 ರೂ. ಮೊತ್ತದ ದೇಣಿಗೆಯನ್ನು ಇದೇ ಸಂದರ್ಭದಲ್ಲಿ ಹಸ್ತಾಂತರಿಸಿದರು.
ಕುದ್ಯಾಡಿ ಗರಡಿಯ ಜಾತ್ರೋತ್ಸವ ಸಮಿತಿಯ ಗೌರವಾಧ್ಯಕ್ಷ ಕೊರಗಪ್ಪ ಪೂಜಾರಿ ಕೊಡಿಬಾಳೆ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಅನಂತರಾಜ ಜೈನ್ ಅಂತರಗುತ್ತು, ಕೊಡಮಣಿತ್ತಾಯ ದೈವದ ಭಂಡಾರದ ಮನೆಯ ಯಜಮಾನ ಶಶಿಕಾಂತ್ ಜೈನ್ ಮುಂಡಾಜೆಗುತ್ತು, ದೈವದ ಭಂಡಾರದ ಮನೆಯ ಯಜಮಾನ ಲಿಂಗಪ್ಪ ಬಂಗೇರ ಕೆಂಪನೊಟ್ಟುಗುತ್ತು, ಬೈದರ್ಕಳ ಭಂಡಾರದ ಮನೆಯ ಯಜಮಾನ ಅಚ್ಯುತ ಪೂಜಾರಿ ಕೊಡಿಬಾಳೆಗುತ್ತು, ಗ್ರಾಮದ ಗುರಿಕಾರ ವಾಸು ಪೂಜಾರಿ, ಸುಲ್ಕೇರಿ ಗ್ರಾಮ ಪಂಚಾಯತ್ ಸದಸ್ಯ ಶುಭಕರ ಪೂಜಾರಿ, ಪದ್ಮಾಂಬ ಕೇಟರರ್ಸ್ ನ ಸುಕೇಶ್ ಜೈನ್, ಜಾತ್ರೋತ್ಸವ ಸಮಿತಿ ಕಾರ್ಯದರ್ಶಿ ಸುಂದರ ಆಚಾರ್ಯ ಅಂತರೊತ್ತು, ಗುತ್ತು- ಬರ್ಕೆ ಮನೆಯವರು ಮತ್ತು ಕುದ್ಯಾಡಿ-ಬರಾಯ ಗ್ರಾಮಸ್ಥರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಸದಾನಂದ ಬಿ. ಬಾಕ್ಯರಡ್ಡ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಸಜಿತ್ ಕುಮಾರ್ ಪಿಜತ್ಯರಡ್ಡ ವಂದಿಸಿದರು.