ಬೆಂಗಳೂರು: ಕೆಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಮಾರ್ಗಸೂಚಿ ಹೊರಡಿಸಿದೆ.
ಈಗ ರಾಜ್ಯದಲ್ಲಿ ಕೋವಿಡ್ 19 ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಆದರೂ, ಪ್ರಪಂಚದ ಕೆಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತಿದ್ದು, ಮುಂಬರುವ ಕ್ರಿಸ್‌ಮಸ್ ಮತ್ತು ಹೊಸವರ್ಷಾಚರಣೆಯ ಸಂದರ್ಭಗಳಲ್ಲಿ ಎಚ್ಚರ ವಹಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಯಂತೆ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು, ರಾಜ್ಯದ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಈ ಅಂಶಗಳ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಸಾರ್ವಜನಿಕರು ಈ ಕ್ರಮಗಳನ್ನು ಪಾಲಿಸುವುದು ಅವಶ್ಯಕವಾಗಿದೆ.
ಮುಚ್ಚಿದ ಸಂರಕ್ಷಣೆಗಳಾದ (closed spaces) ಪಬ್, ಬಾರ್, ರೆಸ್ಟೋರೆಂಟ್, ಸಿನೆಮಾ ಹಾಲ್‌ಗಳು, ಶಾಪಿಂಗ್ ಮಾಲ್, ಕಚೇರಿಗಳು ಸೇರಿದಂತೆ ಬಸ್, ರೈಲು, ಮೆಟ್ರೋ, ವಿಮಾನಯಾನ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಅಗತ್ಯವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ವೃದ್ಧರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು, ಒಳಾಂಗಣದಲ್ಲದ್ದಾಗಲೂ ಮಾಸ್ಕ್ ಧರಿಸುವುದು ಉತ್ತಮ..
ಅರ್ಹರೆಲ್ಲರೂ ಕೋವಿಡ್ ಲಸಿಕೆಯ ಪ್ರಿಕಾಶನರಿ ಡೋಸ್ ಅನ್ನು ಶೀಘ್ರವಾಗಿ ಪಡೆದುಕೊಳ್ಳಬೇಕು. ಉಸಿರಾಟದ ಸಮಸ್ಯೆ ಹಾಗೂ ಕೋವಿಡ್ ಸೋಂಕಿನ ಲಕ್ಷಣಗಳನ್ನು ಹೊಂದಿರುವವರು, ಸ್ವಯಂ ಪ್ರತ್ಯೇಕವಾಗಿದ್ದು, ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಾಗೂ ಫಲಿತಾಂಶದ ಆಧಾರದ ಮೇಲೆ ಚಾಲ್ತಿಯಲ್ಲಿರುವ ಪ್ರಮಾಣೀಕೃತ ಶಿಷ್ಠಾಚಾರದ ಅನ್ವಯ ಕ್ರಮಗಳನ್ನು ಪಾಲಿಸುವುದು.ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಮಧ್ಯಮ ಪ್ರಮಾಣದ ವ್ಯಾಯಾಮ, ಉಸಿರಾಟದ ವ್ಯಾಯಾಮಗಳು ಹಾಗೂ ಧ್ಯಾನವನ್ನು ಮಾಡಬಹುದಾಗಿದೆ. ಸಭೆ ಹಾಗೂ ಸಮಾರಂಭಗಳ ಆಯೋಜಕರು ಈ ಕೆಳಗಿನ ಮಾರ್ಗಸೂಚಿಯನ್ನು ಪಾಲಿಸುವಂತೆ ನಿರೀಕ್ಷಿಸಲಾಗಿದೆ.
ಸಾರ್ವಜನಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆದಷ್ಟೂ ಹೊರಾಂಗಣದಲ್ಲಿ ಮತ್ತು ಒಳ್ಳೆಯ ಗಾಳಿ – ಬೆಳಕಿನ ವ್ಯವಸ್ಥೆ ಇರುವ ಸ್ಥಳಗಳಲ್ಲಿ ಹಗಲು ಹೊತ್ತಿನಲ್ಲಿ ನಡೆಸುವುದರಿಂದ ಆರೋಗ್ಯದ ಮೇಲೆ ಮುಂಜಾನೆ ಹಾಗೂ ಸಂಜೆಯ ಶೀತ ಗಾಳಿಯ ಪರಿಣಾಮವನ್ನು ತಡೆಗಟ್ಟಬಹುದು. ಒಳಾಂಗಣ ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದ್ದು, ದೈಹಿಕ ಅಂತರವನ್ನು ಪಾಲಿಸುವುದು ಅಗತ್ಯವಾಗಿದೆ. ಹೆಚ್ಚಿನ ಜನರು ಗುಂಪುಗೂಡುವಿಕೆಯನ್ನು, ವಿಶೇಷವಾಗಿ ಒಳಾಂಗಣಗಳಲ್ಲಿ ಗುಂಪುಗೂಡುವಿಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು.ಕೋವಿಡ್-19 ಮುನ್ನೆಚ್ಚರಿಕೆ ಹಾಗೂ ನಿಯಂತ್ರಣದಲ್ಲಿ ಈವರೆಗೆ ಸಾಧಿಸಲಾಗಿರುವ ಉತ್ತಮ ಅಂಶಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೇಲೆ ತಿಳಿಸಿರುವ ಸಲಹೆಗಳನ್ನು ಪಾಲಿಸಲು ಸಾರ್ವಜನಿಕರು ಹಾಗೂ ಸಭೆ / ಸಮಾರಂಭಗಳ ಆಯೋಜಕರಿಗೆ ಈ ಮಾಹಿತಿಯನ್ನು ನಿಖರವಾಗಿ ಪ್ರಚುರಪಡಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ / ಜಿಲ್ಲೆಗಳ ಆರೋಗ್ಯ ಪ್ರಾಧಿಕಾರಗಳಿಗೆ ಹಾಗೂ ಬಿಬಿಎಂಪಿ ಆರೋಗ್ಯ ಪ್ರಾಧಿಕಾರಗಳಿಗೆ ತಿಳಿಸಿದೆ.